NEWS

ಮಹಿಳೆಯರನ್ನು ಪೊಲೀಸ್ ಠಾಣೆಗಳಲ್ಲಿ ಗೌರವದಿಂದ ನಡೆಸಿಕೊಳ್ಳಿ

ಮಹಿಳೆಯರು ಬಂದಾಗ ಸಕಾರಾತ್ಮಕವಾಗಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಿ : ಡಾ.ನಾಗಲಕ್ಷ್ಮಿ ಚೌಧರಿ

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲಾ ಹಾಗೂ ತಾಲ್ಲೂಕು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ದೂರು ನೀಡಲು ಬಂದ ಸಮಯದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು ಮತ್ತು ಅವರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಪೊಲೀಸರ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ನಿರ್ದೇಶನದಂತೆ ಆಯೋಜಿಸಲಾಗಿದ್ದ “ಮಹಿಳಾ ಜನ್ ಸುನ್ವಾಯಿ”(ಸಾರ್ವಜನಿಕ ವಿಚಾರಣೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರಿಗೆ ತೊಂದರೆಯಾಗದಂತೆ ಲಿಂಗ ಸೂಕ್ಷ್ಮತೆ ಕಾರ್ಯಕ್ರಮಗಳನ್ನು ಮಾಡಬೇಕು.
ಆಂತರಿಕ ದೂರು ಸಮಿತಿ ರಚನೆ ಬಗ್ಗೆ ಎಲ್ಲಾ ಶಾಲಾ & ಕಾಲೇಜುಗಳಿಗೆ ಭೇಟಿ ನೀಡಿ ಆಂತರಿಕ ದೂರು ಸಮಿತಿಯ ಕಾರ್ಯಕ್ರಮದ ಮಾಹಿತಿ ಹಾಗೂ ಸಾರ್ವಜನಕರಿಗೆ ಕಾರ್ಯಕ್ರಮದ ಅರಿವು ಮೂಡಿಸಬೇಕು. ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ ವಿವರಗಳನ್ನು ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಶಿಕ್ಷಣ ಅಧಿಕಾರಿಗಳಿಗೆ ತಿಳಿಸಿದರು.

ಆಂತರಿಕ ದೂರು ಸಮಿತಿಯ ಕಾರ್ಯಕ್ರಮದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಕಾರ್ಯಕ್ರಮದ ಅರಿವು ಮೂಡಿಸುವುದು ತುಂಬಾ ಅಗತ್ಯ ಎಂದು ತಿಳಿಸಿದರು.

ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಡಿಜಿಟಲ್ ಪೊಲೀಸ್ ಕ್ರಾಂತಿ ಕಾರ್ಯಕ್ರಮ ಮಾಡಬೇಕು ಹಾಗೂ ಠಾಣೆಗೆ ಬಂದ ಮಹಿಳೆಯರ ಸಮಸ್ಯೆಗಳನ್ನು ಪರಿಶೀಲಿಸಿಬೇಕು. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ದೂರುಗಳನ್ನು ಸಲ್ಲಿಸಲು ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಿಬೇಕು ಎಂದು ತಿಳಿಸಿದರು.

ಮಹಿಳಾ ಹಾಗೂ ಮಕ್ಕಳ ಭದ್ರತೆ ಮತ್ತು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಕ್ಕಪಡೆ ವಾಹನಗಳನ್ನು ಆಯೋಜಿಸಿದ್ದು ಶಾಲೆ – ಕಾಲೇಜು, ಪಾರ್ಕ್, ಆಸ್ಪತ್ರೆ, ಬಸ್ ಸ್ಟಾಂಡ್ ಇನ್ನಿತರ ಸ್ಥಳಗಲ್ಲಿ ಪರಿಶೀಲನೆ ನಡೆಸುವುದು ಅಗತ್ಯ ಹಾಗೂ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯವಾಣಿ ನಂಬರ್ ಗಳನ್ನು ಗೋಚರಿಸುವಂತೆ ಅಳವಡಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಮಹಿಳಾ ಮತ್ತು ಮಕ್ಕಳ ವಿದ್ಯಾರ್ಥಿ ನಿಲಯಗಳಿಗೆ ಮೆಡಿಕಲ್ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸಬೇಕು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಉಂಟಾಗದಂತೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕಾಪಾಡಬೇಕು. ಮತ್ತು ಲೈಟಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಲ್ಲಾ ಬಸ್ ಸ್ಟಾಂಡ್ ಗಳಲ್ಲಿ ಮಕ್ಕಳ ಪಾಲನ ಕೇಂದ್ರ (ಮಕ್ಕಳಿಗೆ ಹಾಲುಣಿಸುವ ಕೊಠಡಿ ) ಸ್ಥಾಪಿಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು. ಎಲ್ಲಾ ಸರ್ಕಾರಿ ಬಸ್ ಸ್ಟಾಂಡ್ ಗಳಲ್ಲಿ ಶೌಚಾಲಯದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ಇಲಾಖೆಯು ಮೈಕ್ರೋ ಪೈನಾನ್ಸ್ ಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಕಡಿವಾಣ ಹಾಕಿ ಜಿಲ್ಲೆಗೆ ಮಾದರಿಯಾಗಿದ್ದು ಪೊಲೀಸ್ ಇಲಾಖೆಗೆ ಸಭೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹ ತಡೆಯುವಲ್ಲಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ ಮತ್ತು ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.

ಶಾಲೆಯ ಮಕ್ಕಳು 3 ದಿನಕ್ಕಿಂತ ದೀರ್ಘಾವಧಿಯಲ್ಲಿ ಗೈರು ಹಾಜರಿ ಆದರೆ ಪ್ರಾಂಶುಪಾಲರು ಗೈರು ಹಾಜರಾದ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಮಕ್ಕಳ ಗೈರು ಹಾಜರಿ ಸಂಬಂಧ ಮಾಹಿತಿ ಕುರಿತು ಪರಿಶೀಲಿಸಿ ನಡೆಸಿ ಮಕ್ಕಳ ಮಾಹಿತಿ ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಆರಕ್ಷಕ ಅಧೀಕ್ಷಕರಾದ ಶೋಭರಾಣಿ ವಿ. ಜೆ. ರವರು ಮಾತನಾಡಿ, ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ 420 ಮಹಿಳೆಯರು ಕಾಣೆಯಾಗಿದ್ದು 410 ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ ಹಾಗೂ 2025ನೇ ಸಾಲಿನಲ್ಲಿ 483 ಕಾಣೆಯಾದವರ ಪ್ರಕರಣಗಳು ಆಗಿದ್ದು 468 ಕಾಣೆಯಾದವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ನಂತರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಸಂತ್ರಸ್ತ ಮಹಿಳೆಯರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಆಶಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅಪ್ರಾಪ್ತ ವಯಸ್ಸಿನ ಗರ್ಭಿಣಿ ವರದಿ ಕಡ್ಡಾಯ

1.71 ಲಕ್ಷ ಮಾನವ ದಿನಗಳನ್ನು ಬೇಡಿಕೆ ಇರುವ ಗ್ರಾ.ಪಂ. ಗಳಿಗೆ ಮರುಹಂಚಿಕೆ ಮಾಡಲು ಕ್ರಮ

19,300 ಠೇವಣಿ ಪಡೆಯಲು ಸಹೋದರಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ವ್ಯಕ್ತಿ

Leave a Comment