ಪಾಲನೆ ನ್ಯೂಸ್
ಮಂಡ್ಯ : ಇಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ. ಫಾರಂ, ಮಂಡ್ಯದಲ್ಲಿ ಬೀಜೋತ್ಸವ ಹಾಗೂ ಪೂರ್ವ ಮುಂಗಾರು ಆಂದೋಲನ–2026,
ಕಾರ್ಯಕ್ರಮವನ್ನು ಗೌರವಾನ್ವಿತ ಕುಲಪತಿಗಳಾದ ಡಾ. ಕೆ. ಸಿ. ನಾರಾಯಣಸ್ವಾಮಿ ರವರು ಉದ್ಘಾಟಿಸಿದರು. ಇವರು ಮಾತನಾಡುತ್ತಾ ಉತ್ತಮ ಬೀಜ ಬಳಕೆ ಮಾಡಿದಲ್ಲಿ ಬೆಳೆ ಉತ್ತಮವಾಗಿ ಬೆಳೆದು ರೈತರು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಹವಾಮಾನ ವೈಪರೀತ್ಯ ಹಾಗೂ ನೀರಿನ ಕೊರತೆಯ ಪರಿಸ್ಥಿತಿಯಲ್ಲಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ರೈತರು ಅಳವಡಿಸಿಕೊಳ್ಳಬೇಕು. ನೀರಿನ ಸದ್ಬಳಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಬೆಳೆಯಲ್ಲಿ ವೈವಿಧ್ಯತೆ ಅಳವಡಿಸಿಕೊಂಡಲ್ಲಿ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ತಿಳಿಸಿದರು.
ದೇಸಿ ಬೀಜಗಳ ಮಹತ್ವವನ್ನು ಉಲ್ಲೇಖಿಸಿದ ಅವರು, ರೈತರು ದೇಸಿ ಬೀಜಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ರೈತರ ಬಳಿಯಲ್ಲಿ ಉತ್ತಮ ಗುಣಮಟ್ಟದ ಹಾಗೂ ವಿಶಿಷ್ಟ ಲಕ್ಷಣಗಳಿರುವ ದೇಸಿ ಬೀಜಗಳು ಕಂಡುಬಂದಲ್ಲಿ ಅವುಗಳನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಲು ಮನವಿ ಮಾಡಿದರು. ಅಂತಹ ಬೀಜಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಇತರ ರೈತರಿಗೆ ಹಂಚುವ ಕಾರ್ಯವನ್ನು ವಿಶ್ವವಿದ್ಯಾಲಯ ಕೈಗೊಳ್ಳಲಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಬೀಜಗಳು ಲಭ್ಯವಿದ್ದು, ರೈತರು ಅವುಗಳ ಕುರಿತು ಮಾಹಿತಿ ಪಡೆದು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ವರ್ಷ ಸುಮಾರು 5 ಸಾವಿರ ಟನ್ ಬೀಜೋತ್ಪಾದನೆ ಮಾಡಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದು ಹೇಳಿದರು.
ಸಂಶೋಧನೆಯಿಂದ ಅಭಿವೃದ್ಧಿಪಡಿಸಿದ ಉತ್ತಮ ತಳಿಗಳನ್ನು ವಿಸ್ತರಣಾ ಚಟುವಟಿಕೆಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ವಿಶ್ವವಿದ್ಯಾಲಯ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ನಿವೃತ್ತ ಕುಲಸಚಿವರಾದ ಡಾ. ಬಸವಗೌಡ ಅವರು ಮಾತನಾಡಿ, ಉತ್ತಮ ಬೀಜವನ್ನು ಉತ್ತಮ ಮಣ್ಣಿನಲ್ಲಿ ಬಿತ್ತಿದರೆ ರೈತರಿಗೆ ಉತ್ತಮ ಇಳುವರಿ ದೊರೆಯುತ್ತದೆ ಎಂದು ಹೇಳಿದರು.
ಇಂತಹ ವಿಶೇಷ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸುವ ಅಗತ್ಯವಿದ್ದು, ರೈತರಿಗೆ ಅನುಕೂಲವಾಗುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸರ್ಕಾರ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇಂದಿನ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದ್ದು, ಕೃಷಿ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ರೈತರು ಸ್ವಾವಲಂಬಿಗಳಾಗಿ ಸಂತೋಷದಿಂದ ಬದುಕಲು ಕೃಷಿ ಉದ್ಯಮದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಶೋಧನಾ ನಿರ್ದೇಶಕರಾದ ಡಾ. ಜಿ.ಎಂ. ದೇವಗಿರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಸ್ತರಣಾ ನಿರ್ದೇಶಕರಾದ ಡಾ. ಸಿ. ರಾಮಚಂದ್ರ, ಕುಲಸಚಿವರಾದ ಡಾ. ಪಿ.ಎಸ್. ಫಾತಿಮಾ, ಶಿಕ್ಷಣ ನಿರ್ದೇಶಕರಾದ ಡಾ. ಎನ್. ಶಿವಕುಮಾರ್, ಸಹ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಸ್. ಬಸವರಾಜು, ಬೀಜ ಘಟಕದ ವಿಶೇಷಾಧಿಕಾರಿಗಳಾದ ಹಾಗೂ ಕಾರ್ಯಕ್ರಮದ ಸಂಘಟಕರಾದ ಡಾ. ಎಸ್.ಬಿ. ಯೋಗಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಪ್ರಾಧ್ಯಾಪಕರಾದ ಡಾ. ತಿಮ್ಮೇಗೌಡ ಹಾಗೂ ದೇಶಿ ತಳಿಗಳ ಸಂರಕ್ಷಕರಾದ ಡಾ. ಕೆ.ಪಿ. ಕೃಷ್ಣಪ್ರಸಾದ್ ಭಾಗವಹಿಸಿ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಪ್ರಾಧ್ಯಾಪಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಾವಿರಕ್ಕೂ ಅಧಿಕ ರೈತರು ಹಾಗೂ ದೇಶಿ ತಳಿಯ ಸಂರಕ್ಷಕರು ಹಾಗೂ ಪ್ರಗತಿಪರ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಶೇಷವಾಗಿ 30ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿ ರೈತರಿಗೆ ವಿವಿಧ ಕೃಷಿ ತಂತ್ರಜ್ಞಾನಗಳು, ಬೀಜಗಳು ಹಾಗೂ ನವೀನ ಪದ್ಧತಿಗಳ ಕುರಿತು ಮಾಹಿತಿ ನೀಡಿದವು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
