ಪಾಲನೆ ನ್ಯೂಸ್
ಬೆಂಗಳೂರು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನು ಪೂರೈಸುವ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಬಮುಲ್ ಮುಂದಿನ ಆರು ತಿಂಗಳ ಅವಧಿಗೆ ಸುಮಾರು 2 ಲಕ್ಷ ಕೆಜಿ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಲಿದೆ. ಪ್ರತಿದಿನ 11.5 ರಿಂದ 12 ಟನ್ ನಂದಿನಿ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗುವುದು ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.
ಸುಮಾರು 136 ಕೋಟಿ ರೂ. ವೆಚ್ಚದಲ್ಲಿ ತುಪ್ಪ ಪೂರೈಕೆ ಮಾಡುತ್ತೇವೆ. ನಂದಿನಿ ತುಪ್ಪವು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಗ್ರಾಹಕರ ವಿಶ್ವಾಸ ಗಳಿಸಿದೆ. ಕಲಬೆರಕೆ ತಡೆಗಟ್ಟಲು ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ. ಬೆಂಗಳೂರು ಡೇರಿ ಆವರಣದಲ್ಲಿ ಬುಧವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ತಿರುಪತಿ ಲಡ್ಡು ಪ್ರಸಾದಕ್ಕಾಗಿ ನಂದಿನಿ ತುಪ್ಪದ ಗುಣಮಟ್ಟವನ್ನು ಪರಿಗಣಿಸಿ, ಟಿಟಿಡಿ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಪೂರೈಸಲು ಬೇಡಿಕೆ ಇಟ್ಟಿದೆ ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ. ಈ ಒಪ್ಪಂದದ ಮೂಲಕ, ಕರ್ನಾಟಕದ ನಂದಿನಿ ತುಪ್ಪವನ್ನು ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ಇದಲ್ಲದೆ, ಕೆಎಂಎಫ್ ದಿನಕ್ಕೆ ಒಂದು ಕೋಟಿಗೂ ಹೆಚ್ಚು ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಬಮೂಲ್‌ನಲ್ಲಿ17.5 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 22ರಿಂದ 33 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಮರಳಿರುವುದು ಕನ್ನಡಿಗರಿಗೆ ಮತ್ತೊಂದು ಹೆಮ್ಮೆ ತಂದಿದ್ದು, ರಾಜ್ಯದ ಹಾಲು ಉತ್ಪಾದಕರಿಗೆ ಹೊಸ ಆತ್ಮವಿಶ್ವಾಸ ತುಂಬಿದೆ.
✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
