ಪಾಲನೆ ನ್ಯೂಸ್
ಬೆಂಗಳೂರು: ನಗರದ ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ಹೆಸರು ಹೋಲುವಂತೆ, ತಾನೂ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಸರ್ಜನ್ ಸೇರಿ ಹಲವರಿಗೆ ವಂಚನೆ 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪದ ಮೇಲೆ ಚಿಕ್ಕಮಗಳೂರು ನಿವಾಸಿ ಸತೀಶ್ ಎಂಬುವರು ದೂರು ನೀಡಿದ್ದರು.
ದೂರಿನನ್ವಯ ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದ ನಕಲಿ ಐಎಎಸ್ ಅಧಿಕಾರಿ ಮಿಥುನ್ (28) ಬಂಧಿತ. ಈತನ ಬಲೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್ ಕೂಡ ಬಿದ್ದಿರುವುದು ಬೆಳಕಿಗೆ ಬಂದಿದೆ. ಬಂಧಿತ ಮಿಥುನ್ ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನ ವಿಭಾಗದ ಮುಖ್ಯಸ್ಥ ಹಾಗೂ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಉನ್ನತ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಬಳಿ ತಾನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ನಂತರ ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿ ಎಲ್ಲರನ್ನೂ ನಂಬಿಸುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.

ಜಿಲ್ಲಾ ಸರ್ಜನ್ ಮೂಲಕ ಪರಿಚಯವಾದ ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಅವರಿಗೆ ಸುಮಾರು 1.8 ಕೋಟಿ ರೂ. ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಆರೋಪಿ ನಂಬಿಸಿದ್ದ. ಇದಕ್ಕಾಗಿ ಶೇ.20 ಕಮಿಷನ್ ನೀಡಬೇಕೆಂದು ಒಪ್ಪಂದ ಮಾಡಿಕೊಂಡು, ಜಕ್ಕೂರು ಬಳಿ ಬರೋಬ್ಬರಿ 36 ಲಕ್ಷ ರೂ. ಸೇರಿ ಒಟ್ಟು 41 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
