ಪಾಲನೆ ನ್ಯೂಸ್
ಮಂಡ್ಯ: ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಕಲಿಕೆ ಹಾಗೂ ಮನರಂಜನೆಯ ಅವಕಾಶ ಒದಗಿಸುವುದು “ಅಕ್ಕರೆಯ ಅಂಗಳ” ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದಿನಿ ಕೆ.ಆರ್. ರವರು ತಿಳಿಸಿದರು.
ಕಳೆದ ವರ್ಷದ ಶಿಬಿರವು ಅರಿವು ಕೇಂದ್ರಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಮತ್ತು ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಶಿಬಿರ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ, ಈ ವರ್ಷವೂ ಇನ್ನಷ್ಟು ಪರಿಣಾಮಕಾರಿಯಾಗಿ ಶಿಬಿರವನ್ನು ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿಯೊಂದು ಮಗುವಿನ ಹೆಸರು, ವಯಸ್ಸು, ಶಾಲೆ ಮತ್ತು ಗ್ರಾಮದ ವಿವರಗಳಿರುವ ಗುರುತಿನ ಚೀಟಿ ನೀಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಕನಿಷ್ಠ 80% ವಿದ್ಯಾರ್ಥಿಗಳನ್ನು ಶಿಬಿರಕ್ಕೆ ಒಳಪಡಿಸುವ ಗುರಿ ಸಾಧಿಸಬೇಕು.
2026ರ ಏಪ್ರಿಲ್ 17ರಿಂದ ಮೇ 26ರವರೆಗೆ ಜಿಲ್ಲೆಯ ಎಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಡ್ಡಾಯವಾಗಿ ಶಿಬಿರವನ್ನು ನಡೆಸುವಂತೆ ಸೂಚಿಸಲಾಗಿದ್ದು, ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸುವಂತೆ ಸೂಚಿಸಿದರು.
ಶಿಬಿರದ ಯಶಸ್ಸಿಗಾಗಿ ಗ್ರಂಥಪಾಲಕರು, ಶಿಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDOs) ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇಲಾಖೆಗಳ ನಡುವೆ ಅಸಮನ್ವಯತೆ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಂಚಾಯಿತಿ ಕೇಂದ್ರಗಳಲ್ಲಿರುವ ಅರಿವು ಕೇಂದ್ರಗಳು ಮತ್ತು ಗ್ರಂಥಾಲಯಗಳನ್ನು ಶಿಬಿರದ ಮುಖ್ಯ ಕೇಂದ್ರಗಳಾಗಿ ಬಳಸಬೇಕು. ಅರಿವು ಕೇಂದ್ರಗಳಿಲ್ಲದ ಗ್ರಾಮಗಳಲ್ಲಿ ಶಾಲಾ ಆವರಣಗಳನ್ನು ಶಿಬಿರದ ಸ್ಥಳವಾಗಿ ಬಳಸುವಂತೆ ಸೂಚಿಸಲಾಯಿತು.
ಶಿಕ್ಷಣ ಇಲಾಖೆಯ ಬಿಆರ್‌ಪಿ (BRP), ಸಿಆರ್‌ಪಿ (CRP) ಹಾಗೂ ಶಿಕ್ಷಕರು ಶಿಬಿರದ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಬೇಕು. ಪ್ರತಿ ಪಂಚಾಯಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ತಿಳಿಸಿದರು.
ಶಿಬಿರದ 34 ದಿನಗಳ ಕಾರ್ಯಕ್ರಮದಲ್ಲಿ ಗಣಿತ ಮತ್ತು ವಿಜ್ಞಾನ ಆಧಾರಿತ ಕಲಿಕೆ, ಕಲೆ, ಸಂಗೀತ, ನೃತ್ಯ, ಯೋಗ ಹಾಗೂ ಕೌಶಲ್ಯ ಆಧಾರಿತ ತರಬೇತಿಗಳನ್ನು ಒಳಗೊಂಡಿದ್ದು, ಮಕ್ಕಳ ನೊಂದಣಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಿ, ಪ್ರತಿಯೊಂದು ಮಗುವಿನ ಹೆಸರು, ವಯಸ್ಸು, ಶಾಲೆ ಮತ್ತು ಗ್ರಾಮದ ವಿವರಗಳಿರುವ ಗುರುತಿನ ಚೀಟಿ ನೀಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಕನಿಷ್ಠ 80% ವಿದ್ಯಾರ್ಥಿಗಳನ್ನು ಶಿಬಿರಕ್ಕೆ ಒಳಪಡಿಸುವ ಗುರಿ ಇಡುವಂತೆ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳ ಮೂಲಕ ಶಿಬಿರದ ಮಾಹಿತಿ ವ್ಯಾಪಕವಾಗಿ ಪ್ರಸಾರ ಮಾಡುವಂತೆ ಹಾಗೂ ಶಿಬಿರದ ಸ್ಥಳ, ಸಮಯ (ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ) ಹಾಗೂ ಚಟುವಟಿಕೆಗಳ ವಿವರಗಳನ್ನು ಸ್ಪಷ್ಟವಾಗಿ ಪ್ರಕಟಿಸುವಂತೆ ಸೂಚಿಸಿದರು.

ಶಿಬಿರದ ಪ್ರಗತಿಯನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲಾಗುವುದು. ದಿನನಿತ್ಯದ ಮಾಹಿತಿ ಸಂಗ್ರಹಿಸಲು ಸ್ಪ್ರೆಡ್‌ಶೀಟ್ ವ್ಯವಸ್ಥೆ ರೂಪಿಸಲಾಗಿ, ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಈ ಕುರಿತು ನಡೆದ KSWAN ವೀಡಿಯೋ ಸಂವಾದದಲ್ಲಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಜಿ.ಎ. (DDPI), ಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರಾದ (ಆಡಳಿತ) DIET ಯೋಗೇಶ್ ಕೆ., ಬ್ಲಾಕ್ ಶಿಕ್ಷಣಾಧಿಕಾರಿಗಳು (BEOs), ಎಲ್ಲಾ ತಾಲೂಕು ಮಟ್ಟದ ಕಾರ್ಯನಿರ್ವಹಣಾಧಿಕಾರಿಗಳು (EOs), ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDOs) ಹಾಗೂ ಗ್ರಂಥಪಾಲಕರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
