ಪಾಲನೆ ನ್ಯೂಸ್
ಮಂಡ್ಯ : 2023 ರಲ್ಲಿ ಗ್ರಾಮೀಣರಿಗಾಗಿ ಪ್ರಾರಂಭವಾದ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ಡಾ. ಕುಮಾರ ಅವರ ಕನಸಿನ ಹೃದಯ ವೈಶಾಲ್ಯ ಯೋಜನೆಯಡಿ ಜಿಲ್ಲೆಯಲ್ಲಿ ಉಚಿತವಾಗಿ 2023 ರಿಂದ 31 ಸಾವಿರ ಜನರಿಗೆ ಇಸಿಜಿ ಮೂಲಕ ಹೃದಯ ತಪಾಸಣೆಯಾಗಿದ್ದು 2025 ವರ್ಷದಲ್ಲಿ 9,000 ಸಾವಿರ ಜನರಿಗೆ ಇಸಿಜಿ ಮೂಲಕ ತಪಾಸಣೆಯಾಗಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಹೃದಯ ವೈಶಾಲ್ಯ ಯೋಜನೆಯು ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ ಕುಮಾರ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕಾದರೆ ನಗರಕ್ಕೆ ಬರಬೇಕಾದ ಅನಿವಾರ್ಯತೆ ಇರುವುದರಿಂದ ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ‘ಹೃದಯ ವೈಶಾಲ್ಯ ಯೋಜನೆ ಜಾರಿಗೆ ತರಲಾಯಿತು ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ತಪಾಸಣೆಯನ್ನು ಗ್ರಾಮೀಣ ಜನರು ಸೂಕ್ತ ಸಮಯದಲ್ಲಿ ಮಾಡಿಸಿಕೊಳ್ಳುವುದಿಲ್ಲ. ಇದರಿಂದ ಅನಾಹುತವಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಹತ್ವದ ಯೋಜನೆಯನ್ನು ರೂಪಿಸಿದರು.
ಜಿಲ್ಲಾಧಿಕಾರಿಗಳಾದ ಡಾ ಕುಮಾರ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಮಯದಲ್ಲಿ ಕಾರ್ಪೋರೇಟ್ ಸಂಸ್ಥೆಯವರ ಗಮನ ಸೆಳೆದು ಈ ಯೋಜನೆ ಅನುಷ್ಠಾನಗೊಳಿಸಿ ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು. ಸುಮಾರು 200ಕ್ಕೂ ಹೆಚ್ಚು ಇಸಿಜಿ ಯಂತ್ರಗಳನ್ನು ಉಚಿತವಾಗಿ ದೊರಕಿಸಿದ್ದರು. ಪರಿಣಾಮ 1.50 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡಿದ್ದರು. ಅದೇ ಅನುಕೂಲವನ್ನು ಜಿಲ್ಲೆಯ ಜನರಿಗೂ ಒದಗಿಸಬೇಕೆಂಬ ಸದಾಶಯದೊಂದಿಗೆ ಯೋಜನೆ ಯನ್ನು ಸಕ್ಕರೆ ನಾಡಿಗೆ ತಂದಿದ್ದಾರೆ. ಹೃದಯಕ್ಕೆ ಸಂಬಂಧಿಸಿದ ಯೋಜನೆಯಾಗಿದ್ದರಿಂದ ಇದಕ್ಕೆ ಹೃದಯ ವೈಶಾಲ್ಯ ಯೋಜನೆ ಎಂಬ ಹೆಸರನ್ನು ಡಾ.ಕುಮಾರ ಅವರೇ ಇಟ್ಟಿರುವುದು ಮತ್ತೊಂದು ವಿಶೇಷವಾಗಿದೆ.
ಗ್ರಾಮೀಣ ಭಾಗದ ಜನರು ಹೃದಯ ಸಂಬಂಧಿತ ಪರೀಕ್ಷೆಗಳನ್ನು ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಂತೆಯೇ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ 120 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ ಮೊದಲ ಹಂತದಲ್ಲಿ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸಲಾಗಿದೆ. ಇದನ್ನು ನಿರ್ವಹಣೆ ಮಾಡಲು ಪಿ.ಎಚ್.ಸಿ.ಗಳ ವೈದ್ಯರು ಸೇರಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಪಾಸಣೆಯೂ ನಡೆಯುತ್ತಿದೆ ಜಿಲ್ಲೆಯಲ್ಲಿ ಸುಮಾರು ( ಅಂದಾಜು ) 170 ಜನರು ಹೃದಯಾಘಾತದಿಂದ ಸಾವನನಪ್ಪುತ್ತಿದ್ದಾರೆ. 31 ಸಾವಿರ ಜನರಲ್ಲಿ 5% ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೃದಯ ಸಂಬಂಧ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಜಾರಿ ಅಧಿಕಾರಿ ಡಾ. ಬೆಟ್ಟಸ್ವಾಮಿ, ಜಿಲ್ಲಾ ಟಿ. ಬಿ. ನಿಯಂತ್ರಣ ಅಧಿಕಾರಿ ಡಾ. ಆಶಾಲತಾ,ಐ. ಎನ್. ಎ ಅಧ್ಯಕ್ಷರು ಡಾ. ಮರಿಗೌಡ, ನಗರಸಭೆಯ ಪರಿಸರ ಅಭಿಯಂತರರು ರುದ್ರೇಗೌಡ, ಜಿಲ್ಲಾ ಸಲಹೆಗರಾರು ತಿಮ್ಮಯ ರವರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
