ಪಾಲನೆ ನ್ಯೂಸ್
ಮಂಡ್ಯ: ಇದೇ ಏಪ್ರಿಲ್ -ಮೇ ತಿಂಗಳಿನಲ್ಲಿ ದೇಶದಾದ್ಯಂತ ನಡೆಯಲಿರುವ ಜನಗಣತಿ ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ವಿಷಯ ಶಿಕ್ಷಕರನ್ನು ಪರಿಗಣಿಸದೇ, ವಿನಾಯಿತಿ ನೀಡಬೇಕೆಂದು ಮಂಡ್ಯ ತಹಸೀಲ್ದಾರ್ ರವರಿಗೆ ಮನವಿ ಪತ್ರ ನೀಡಿ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಮಂಡ್ಯ ತಾಲ್ಲೂಕು ಘಟಕ ಆಗ್ರಹಿಸಿದೆ.
ಈ ಬಗ್ಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಮಂಡ್ಯ ತಾಲ್ಲೂಕು ದಕ್ಷಿಣ ವಲಯದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣಮಂಗಲ,
ಎಸ್. ಎಸ್. ಎಲ್. ಸಿ. ವಾರ್ಷಿಕ ಸಮೀಪಿಸುತ್ತಿದ್ದು, ಪರೀಕ್ಷೆಗೆ ಮಕ್ಕಳ ತಯಾರಿಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ಬೆಳಿಗ್ಗೆ ಮತ್ತು ಸಂಜೆಯ ತರಗತಿಗಳು, ರಾತ್ರಿ ತರಗತಿಗಳು, ಭಾನುವಾರ ಹಾಗೂ ರಜಾ ದಿನದ ತರಗತಿಗಳನ್ನು ಶಿಕ್ಷಕರು ಕಳೆದ ಕೆಲವು ತಿಂಗಳುಗಳಿಂದಲೇ ತೆಗೆದುಕೊಳ್ಳುತ್ತಿದ್ದು, ಶಿಕ್ಷಕರಿಗೆ ವಿರಾಮವಿಲ್ಲದೆ, ವೈಯುಕ್ತಿಕ ಜೀವನವೇ ಇಲ್ಲದಂತಾಗಿದೆ, ಜೊತೆಗೆ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಕಾರ್ಯ, ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಎರಡನೇ ಪರೀಕ್ಷೆಗೆ ಸಿದ್ದಗೊಳಿಸುವುದು, ಎರಡನೇ ಪರೀಕ್ಷಾ ಕರ್ತವ್ಯ ನಿರ್ವಹಣೆ, ಅದರ ಮೌಲ್ಯಮಾಪನ ಹೀಗೆ ಹಲವು ಕಾರ್ಯಕ್ರಮಗಳನ್ನು ರಜಾ ಅವಧಿಯಲ್ಲೇ ಶಿಕ್ಷಕರು ನಿರ್ವಹಿಸಬೇಕಾಗಿದೆ.

ಜನಗಣತಿ ಕಾರ್ಯಕ್ಕೂ ನಿಯೋಜನೆ ಮಾಡಿದರೆ, ಪ್ರೌಢಶಾಲೆಯಲ್ಲಿ ವಿಷಯ ಬೋಧನೆ ಮಾಡುವ ಶಿಕ್ಷಕರಿಗೆ ಬಹಳ ಕಷ್ಟವಾಗಲಿದೆ. ಪ್ರೌಢಶಾಲಾ ಶಿಕ್ಷಕರನ್ನು ಈ ಬಾರಿಯ ಗಣತಿ ಕಾರ್ಯದಿಂದ ವಿನಾಯಿತಿ ನೀಡದಿದ್ದರೆ, ಶೈಕ್ಷಣಿಕ ಕಾರ್ಯಗಳಿಗೆ ಅಡೆತಡೆಗಳು ಉಂಟಾಗಬಹುದೆಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಒಂದು ವೇಳೆ ಇತರ ಇಲಾಖೆ ಅಥವಾ ವೃಂದದ ನೌಕರರನ್ನು ನಿಯೋಜಿಸಿದ ನಂತರ ಗಣತಿ ಕಾರ್ಯಕ್ಕೆ ಕೊರತೆಯಾಗಿ ಪ್ರೌಢಶಾಲಾ ಸಹಶಿಕ್ಷಕರನ್ನು ನಿಯೋಜನೆ ಮಾಡುವ ಸಂದರ್ಭ ಬಂದಲ್ಲಿ, ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು, ಅನಾರೋಗ್ಯ ಪೀಡಿತರು, ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿರುವವರು, ವಿಕಲಚೇತನರು, ಗರ್ಭಿಣಿಯರು, ಚಿಕ್ಕ ಮಗುವನ್ನು ಹೊಂದಿರುವ ತಾಯಂದಿರು, ತೀವ್ರತರವಾದ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು ಹಾಗೂ ಪರಿಗಣಿಸಿದ ಇತರ ಶಿಕ್ಷಕರಿಗೆ ಸಿಗಬೇಕಾದ ಗಳಿಕೆ ರಜೆ ಹಾಗೂ ಇತರ ಆರ್ಥಿಕ ಸೌಲಭ್ಯಗಳನ್ನು ನಿಯಮಾನುಸಾರ ಕಲ್ಪಿಸಿಕೊಡುವುದು ಹಾಗೂ ಬೇಸಿಗೆ ಕಾಲವಾದ್ದರಿಂದ, ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ನೌಕರರು ಬೇಗನೆ ಬಳಲಿ, ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಇರುವುದರಿಂದ, ಕಾಲಮಿತಿ ನಿಗಧಿಪಡಿಸಿ, ಪ್ರತಿದಿನ ಇಷ್ಟೇ ಮನೆಗಳನ್ನು ಗಣತಿ ಮಾಡಿ, ವರದಿ ನೀಡಬೇಕೆಂಬ ಒತ್ತಡ ನೀಡದೇ, ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಗಣತಿ ಕಾರ್ಯ ಸುಲಲಿತವಾಗಿ ನಡೆಯುವಂತೆ ವಾತಾವರಣ ಕಲ್ಪಿಸಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕು ಉತ್ತರ ವಲಯದ ಅಧ್ಯಕ್ಷ ಎನ್. ಗೋಪಿನಾಥ್ ಹಾಗೂ ಮಂಡ್ಯ ತಾಲ್ಲೂಕು ದಕ್ಷಿಣ ಹಾಗೂ ಉತ್ತರ ವಲಯದ ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
