ಪಾಲನೆ ನ್ಯೂಸ್
ಮಂಡ್ಯ: ಫೆಬ್ರವರಿ 6 ರಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬಾಲ್ಯವಿವಾಹ ಮುಕ್ತ ಮಂಡ್ಯ ಜಿಲ್ಲೆ ಅಭಿಯಾನ ಅಂಗವಾಗಿ ಬೃಹತ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ(DCPC) ಹಾಗೂ ಬಾಲ್ಯವಿವಾಹ ಮುಕ್ತ ಮಂಡ್ಯ ಜಿಲ್ಲೆ ಅಭಿಯಾನ ಅಂಗವಾಗಿ ಬೃಹತ್ ತರಬೇತಿ ಕಾರ್ಯಗಾರದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಸಂಕಲ್ಪ ಅಭಿಯಾನದ ಅಂಗವಾಗಿ ಮಕ್ಕಳ ಸಂರಕ್ಷಣೆ ಮತ್ತು ಕಾನೂನಿನ ಕುರಿತಾಗಿ ಬೃಹತ್ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಎಲ್ಲಾ ಶಿಕ್ಷಕರು ಹಾಗೂ ಖಾಸಗಿ ಶಾಲೆಗಳ ವಾಹನ ಚಾಲಕರು, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಲಿದ್ದು ಸುಮಾರು ಒಂದುವರೆ ಯಿಂದ ಎರಡು ಸಾವಿರ ಜನರು ಭಾಗಿಯಾಗಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆಯ ಕುರಿತಾಗಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಬಾಲ ನ್ಯಾಯ ಮಂಡಳಿಯ ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ಇಲಾಖೆಗಳಿಂದ ಮಕ್ಕಳಿಗೆ ಸಂಬಂಧಿಸಿದ 10 ಮಳಿಗೆಗಳನ್ನು ತೆರೆಯಲಾಗುವುದು. ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕಡ್ಡಾಯವಾಗಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಜವಾಬ್ದಾರಿ ವಹಿಸಿರುವ ಇಲಾಖೆಗಳು ಸಮನ್ವಯ ಸಾಧಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಕೆ.ಆರ್ ನಂದಿನಿ, ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


