NEWS

ಗಿಲ್ಲಿ ನಟನಿಗೆ ತವರಿನ ಸ್ವಾಗತ

ಮಳವಳ್ಳಿಯಲ್ಲಿ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ

ಪಾಲನೆ ನ್ಯೂಸ್

ಮಳವಳ್ಳಿ: ಬಿಗ್ ಬಾಸ್-12ನೇ ಆವೃತ್ತಿ ರಿಯಾಲಿಟಿ ಶೋನಲ್ಲಿ ವಿಜೇತ ಗಿಲ್ಲಿ (ನಟರಾಜ್)ಯ ತವರು ಮಳವಳ್ಳಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಬೃಹತ್ ಹೂವಿನ ಹಾರಹಾಕಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿ‌ ಬರ ಮಾಡಿಕೊಂಡರು.

ಪಟ್ಟಣದ ಹೊರ ಭಾಗದಲ್ಲಿರುವ ಶಕ್ತಿ ದೇವತೆ ಶ್ರೀದಂಡಿನ ಮಾರಮ್ಮ ದೇವ ಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಗ್ ಬಾಸ್ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದರು. ಅನಂತ್ ವೃತ್ತದ ಬಳಿ ಗಿಲ್ಲಿಗೆ ಬೃಹತ್ ಹೂವಿನ ಹಾರ ಹಾಕಿ ಹೂಮಳೆ ಸುರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕರ ದಂಡು ಜಯ ಘೋಷದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬೈಕ್‌ Rally : ಶ್ರೀದಂಡಿನ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ Rally ದಡದಪುರದವರೆವಿಗೂ ಹಮ್ಮಿಕೊಳ್ಳಲಾಗಿತ್ತು.

ಸೆಲ್ಪಿಗೆ ಮುಗಿಬಿದ್ದ ಯುವಕರು: ಗಿಲ್ಲಿ ನಟನೊಂದಿಗೆ ಫೋಟೋತೆಗೆದುಕೊಳ್ಳಲು ಯುವಕ-ಯುವತಿಯರು ಮುಗಿಬಿದ್ದರು. ಫೋಟೋ ತೆಗದುಕೊಳ್ಳುವ ಸಂದರ್ಭದಲ್ಲಿ ಎಳೆದಾಡಿದರು. ಪೊಲೀಸರು ಯುವಕರನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟರು.

ಸಾವಿರಾರು ಮಂದಿ ಭಾಗಿ: ಗಿಲ್ಲಿನಟನನ್ನು ನೋಡಲು ಮಂಡ್ಯ, ಮೈಸೂರು, ಚಾಮರಾಜ ನಗರ, ಹನೂರು, ಕೊಳ್ಳೇಗಾಲ ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಯುವಕ-ಯುವತಿಯರ ದಂಡೇ ಆಗಮಿಸಿತ್ತು. ಪಟ್ಟಣದಲ್ಲಿ ಗಿಲ್ಲಿ ಅಭಿಮಾನಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಗಿಲ್ಲಿ ಗಿಲ್ಲಿ ಎಂಬ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.

ಪ್ರತಿಯೊಂದು ಹಳ್ಳಿಗಳಲ್ಲಿ ಸ್ವಾಗತ: ಮಳವಳ್ಳಿ ಪಟ್ಟಣದಿಂದ ಸುಲ್ತಾನ್ ರಸ್ತೆಯ ಮೂಲಕ ಹುಟ್ಟೂರು ದಡದಪುರಕ್ಕೆ ಆಗಮಿಸುವ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮದ ಗೇಟ್‌ನಲ್ಲಿ ಗಿಲ್ಲಿಗೆ ಮಂಗಳಾರತಿ ಎತ್ತಿ ತಮಟೆ ವಾದ್ಯಗಳೊಂದಿಗೆ ಈಡುಗಾಯಿ ಒಡೆದು ಸ್ವಾಗತಿಸಿದರು.

ಮನೆಗೆದ್ದ ಗಿಲ್ಲಿ: ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ಗಿಲ್ಲಿ ನಟ ರೀಲ್ಸ್ ಮೂಲಕ ತನ್ನ ಮಾತಿನ ಚಟಾಕಿಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ಗಿಲ್ಲಿನಟ ಖಾಸಗಿ ವಾಹಿನಿಯಲ್ಲಿ ನಡೆದ ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾ ಚುರಲ್ಸ್ ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರಸ್ತುತದಲ್ಲಿ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್-12ನೇ ಆವೃತ್ತಿಯಲ್ಲಿ ವಿಜೇತರಾಗಿ ಗಿಲ್ಲಿಗೆ ಸಾವಿರಾರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದ ದೃಶ್ಯ ಅಭಿಮಾನಕ್ಕೆ ಮಿತಿ ಇಲ್ಲದಂತಿತ್ತು.

ಬಿಗ್‌ಬಾಸ್‌ನಲ್ಲಿ ಗಿಲ್ಲಿನಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗಿಲ್ಲಿನಟ ಆಗಮಿಸಿದ ವೇಳೆ ಆರ್. ಆರ್‌ ರೆಸ್ಟೋರೆಂಟ್‌ನಲ್ಲಿ ಮಾಜಿ ಪುರಸಭೆ ಸದಸ್ಯ ರಾಜು ಅವರ ನೇತೃತ್ವದಲ್ಲಿ ಮಸ್ರೂಮ್ ಬಿರಿಯಾನಿ, ಚಿಕನ್ ಬಿರಿಯಾನಿ ಹಾಗೂ ಕಾಲ್‌ಸೂಪ್ ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು. ನಂತರ ಗಿಲ್ಲಿನಟನ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನವನ್ನು ಮೆರೆದರು.

ಪೊಲೀಸ್‌ ಭದ್ರತೆ: ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿ ತಮ್ಮ ಊರಿಗೆ ಆಗಮಿಸುವ ಗಿಲ್ಲಿನಟನನ್ನು ನೋಡಲು ಯುವಕರು ಸಾವಿರಾರು ಸಂಖ್ಯೆಯಲ್ಲಿ ಯುವಕರು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿವೈಎಸ್‌ಪಿ ಯಶವಂತಕುಮಾರ್ ನೇತೃತ್ವದಲ್ಲಿ ಪಟ್ಟಣದ ಹಾಗೂ ತಾಲೂಕಿನ ದಡದಪುರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಜನದಟ್ಟಣೆ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಪ್ರಶಸ್ತಿಗೆ ಮುತ್ತು: ಪಟ್ಟಣದ ಅನಂತ್ ರಾಂ ವೃತ್ತದಲ್ಲಿ ಬಿಗ್‌ಬಾಸ್‌ನಲ್ಲಿ ನೀಡಿದ ಪ್ರಶಸ್ತಿಯನ್ನು ಪ್ರದರ್ಶಿಸಿದ ಗಿಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಪ್ರಶಸ್ತಿಯನ್ನು ಪ್ರದರ್ಶಿಸಿ ಮುತ್ತು ನೀಡಿದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಸೇನಾ ಪರೀಕ್ಷೆ ವೇಳೆ ಅಕ್ರಮ ನಡೆಸಿರುವ 18 ಮಂದಿ ವಿರುದ್ದ ದೂರು

ಕರ್ನಾಟಕ ಸಂಘ ಕತಾರ್ ದೋಹಾದಲ್ಲಿ ಭವ್ಯವಾಗಿ ಕಾರ್ಮಿಕ ದಿನಾಚರಣೆ 2026 ಆಚರಣೆ

ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ದೌರ್ಜನ್ಯ ತಡೆ ಕುರಿತು ವಿಚಾರಗೋಷ್ಠಿ – ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

Leave a Comment