ಪಾಲನೆ ನ್ಯೂಸ್
ಮಂಡ್ಯ: ಜಿ.ಪಂ.ಕಚೇರಿಯಲ್ಲಿ ಪ್ರತೀ ಸೋಮವಾರದಂತೆ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಜಿ.ಪಂ.ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್. ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಮನವಿ ಮತ್ತು ದೂರುಗಳನ್ನು ಜಿ.ಪಂ. ಸಿಇಒ ಅವರಿಗೆ ಸಲ್ಲಿಸಿದರು. ಈ ಕುರಿತು ಮಾತನಾಡಿದ ಸಿಇಓ ನಂದಿನಿ ಅವರು ಈವರೆಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಿಗೆ ಸ್ವೀಕೃತವಾಗಿರುವ ದೂರುಗಳ ಕುರಿತು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಆಯಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವರದಿಗಳನ್ನು ಪಡೆಯಲಾಗುತ್ತಿದೆ ಎಂದರು.
ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ, ಇ-ಸ್ವತ್ತು, ಒತ್ತುವರಿ ತೆರವು ಸಂಬಂಧ ಮನವಿ ಪತ್ರಗಳು ಹಾಗೂ ಗ್ರಾ.ಪಂ. ಗಳಲ್ಲಿ ವಿವಿಧ ಯೋಜನೆಗಳಡಿ ಸರಿಯಾದ ಸವಲತ್ತು ದೊರಕುತ್ತಿಲ್ಲ ಮತ್ತು ವಿವಿಧ ಯೋಜನೆಗಳಡಿ ಹಣ ದುರುಪಯೋಗವಾಗಿದೆ ಎಂಬ ದೂರುಗಳು ಸ್ವೀಕೃತವಾಗಿದ್ದು, ಸದರಿ ಮನವಿಗಳು ಮತ್ತು ದೂರುಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ತೆಗೆಸುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೆಲವು ದೂರುಗಳು ಬಂದ ಸಂದರ್ಭದಲ್ಲಿ ಅವುಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಲು ಕಾಲವಕಾಶ ಅಗತ್ಯವಿರುತ್ತದೆ ಹಾಗೂ ಈ ಸಂಬಂಧ ಕ್ರಮ ತೆಗೆದುಕೊಳ್ಳಲು ನಿಯಮಾನುಸಾರ ಹಲವಾರು ಪ್ರಕ್ರಿಯೆಗಳಿದ್ದು, ಅದರಂತೆಯೇ ಕ್ರಮವಹಿಸಬೇಕಾಗಿರುತ್ತದೆ. ಇದನ್ನು ವಿಳಂಬ ಎಂದುಕೊಳ್ಳದೇ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ತಾ.ಪಂ.ಹಂತದಲ್ಲಿ ಅನುಪಾಲನಾ ಸಭೆ ಆಯೋಜನೆ: ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸ್ವೀಕೃತವಾದ ದೂರು ಮತ್ತು ಮನವಿಗಳನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಗಳಿಗೆ ಕಳುಹಿಸಲಾಗಿದ್ದು, ಸದರಿ ಅರ್ಜಿಗಳಿಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಆಯಾ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಮಳವಳ್ಳಿ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಸಭೆ ಪೂರ್ಣಗೊಂಡಿದ್ದು ಮದ್ದೂರು ತಾ.ಪಂ.ನಲ್ಲಿ ಅನುಪಾಲನಾ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಸಹಾಯಕ ಕಾರ್ಯದರ್ಶಿ (ಆಡಳಿತ) ರವೀಂದ್ರ, ಪಿಐಇಓ ಅನಿತಾ ಸೇರಿದಂತೆ ಇತರರು ಹಾಜರಿದ್ದರು.

