ಪಾಲನೆ ನ್ಯೂಸ್
ಮಂಡ್ಯ: ಅನ್ನಭಾಗ್ಯ ಹಾಗೂ ಇತರೆ ಸಾರ್ವಜನಿಕ ಪಡಿತರ ವಿತರಣಾ ಯೋಜನೆಗಳಡಿ ಕಾರ್ಯನಿರ್ವಹಿಸುವ ಹಮಾಲಿ ಕೂಲಿ (ಲೋಡ್–ಅನ್ಲೋಡ್) ಕಾರ್ಮಿಕರ ಕುಂದುಕೊರತೆಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಮಾಲಿ ಕಾರ್ಮಿಕರು ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ESI ಹಾಗೂ PF ಪಾವತಿಯಲ್ಲಿ ಅಸಮರ್ಪಕತೆ ದೂರುಗಳ ಕುರಿತು ಚರ್ಚಿಸಲಾಯಿತು.
ಕಾರ್ಮಿಕರ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದರು:
1. ಆಹಾರ ಧಾನ್ಯಗಳ ಎತ್ತುವಳಿ ಹಾಗೂ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಸಗಟು ಹಾಗೂ ಚಿಲ್ಲರೆ ಗುತ್ತಿಗೆದಾರರು ಸಕಾಲದಲ್ಲಿ ಕ್ರಮವಹಿಸಬೇಕು.
2. ಹಮಾಲಿ ಕಾರ್ಮಿಕರಿಗೆ ಪ್ರತೀ ತಿಂಗಳು 5ನೇ ತಾರೀಖಿನೊಳಗೆ ಕೂಲಿ ಪಾವತಿಸುವುದು ಕಡ್ಡಾಯ.
3. ಪ್ರತೀ ತಿಂಗಳು 10ನೇ ತಾರೀಖಿನೊಳಗೆ ಅನ್ನಭಾಗ್ಯ ಹಾಗೂ ಇತರೆ ಯೋಜನೆಗಳ ಪಡಿತರ ಎತ್ತುವಳಿ ಮತ್ತು ವಿತರಣೆಯನ್ನು ಪೂರ್ಣಗೊಳಿಸಬೇಕು.
4. ಪ್ರತೀ ಮಾಹೆ ಹಮಾಲಿ ಕಾರ್ಮಿಕರಿಗೆ ESI ಹಾಗೂ PF ಕಡ್ಡಾಯವಾಗಿ ಪಾವತಿಸಿ, ಅದರ ದಾಖಲೆಗಳನ್ನು ಹಾಗೂ ಮಾಹಿತಿಯನ್ನು ಕಚೇರಿಗೆ ನೀಡಬೇಕು.
5. ಉದ್ಯೋಗದಾತರ ವಂತಿಕೆ (PFI)ಯನ್ನು ನಿಯಮಾನುಸಾರ ಸಂಪೂರ್ಣವಾಗಿ ಪಾವತಿಸಬೇಕು.
6. ಹಮಾಲಿ ಕಾರ್ಮಿಕರ ಕುಂದುಕೊರತೆಗಳ ತ್ವರಿತ ಪರಿಹಾರಕ್ಕಾಗಿ ದೂರು ಸ್ವೀಕಾರ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಯಿತು.
7. ಮೇಲ್ಕಂಡ ಸೂಚನೆಗಳ ಉಲ್ಲಂಘನೆ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಪ್ರತೀಕ್ ಜಿ. ಹೆಗಡೆ, ಜಿಲ್ಲಾ ಕಾರ್ಮಿಕ ಅಧಿಕಾರಿ, ಲೀಡ್ ಬ್ಯಾಂಕ್ ಮ್ಯಾನೇಜರ್, ಐಡಿಎಫ್ ಸಿ ಬ್ಯಾಂಕ್ ವ್ಯವಸ್ಥಾಪಕ, ಜಿಲ್ಲೆಯ ಎಲ್ಲಾ ಸಗಟು ಮತ್ತು ಚಿಲ್ಲರೆ ಸಾಗಣೆ ಗುತ್ತಿಗೆದಾರರು, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದರಾಜು, ಜಿಲ್ಲಾಧ್ಯಕ್ಷ ಬಿ.ಕೃಷ್ಣ , ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಇನ್ನಿತರ ಅಧಿಕಾರಿಗಳು ಹಾಜರಿದ್ದರು.
