ಪಾಲನೆ ನ್ಯೂಸ್
ಮಂಡ್ಯ:- ವಿಶ್ವಕ್ಕೆ ಮಾದರಿಯಾಗುವ ಕೊಡುಗೆಗಳು, ಆದರ್ಶಗಳು, ಚಿಂತನೆಗಳು ಮೌಲ್ಯಗಳನ್ನು ರಾಷ್ಟ್ರ ಕವಿ ಕುವೆಂಪು ಅವರು ನೀಡಿದ್ದಾರೆ. ಅವೆಲ್ಲವನ್ನೂ ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅರ್ಕೇಶ್ವರ ನಗರ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ವಿಶ್ವಮಾನವ ದಿನಾಚರಣೆ” ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ. ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದವರು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದವರು. ಹಾಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಂತೆ ಕನ್ನಡದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ (ಕವನ, ಕಾದಂಬರಿ, ನಾಟಕ, ಮಹಾಕಾವ್ಯ) ಕೃಷಿಯನ್ನು ಮಾಡಿ ತಮ್ಮದೇ ಆದ ಚಾಪನ್ನು ಕುವೆಂಪು ಮೂಡಿಸಿದ್ದಾರೆ. ಉತ್ತಮವಾದ ಬರವಣಿಗೆಯಿಂದ ಆರೋಗ್ಯಕರವಾದ ಸಮಾಜವನ್ನು ಸೃಷ್ಟಿಸಲು ಶ್ರಮವಹಿಸಿದ್ದಾರೆ ಎಂದು ಹೇಳಿದರು.
ಕುವೆಂಪು ಕೇವಲ ವ್ಯಕ್ತಿಯಾಗಿರಲಿಲ್ಲ ಅವರು ನಾಡು ಕಂಡ ಒಂದು ಶಕ್ತಿಯಾಗಿದ್ದರು. ವಿಶ್ವದ ಮನುಷ್ಯರೆಲ್ಲ ಒಂದೇ ಮತ ಎಂಬ ಕಲ್ಪನೆಯನ್ನು ಜಗತ್ತಿಗೆ ನೀಡಿದ್ದಾರೆ. ಯಾವುದೇ ಮನುಷ್ಯರು ಧರ್ಮ ಜಾತಿಯ ತಂಕೋಲೆಗೆ ಸೀಮಿತವಾಗದೆ ವಿಶ್ವಮಾನವರಾಗಬೇಕು ಎಂಬ ಸಂದೇಶವನ್ನು ಸಾರಿದ್ದಾರೆ ಎಂದು ತಿಳಿಸಿದರು.
ಕನ್ನಡ ನಾಡಿನ ಸಂಸ್ಕೃತಿ ಸಂಪ್ರದಾಯದ ವೈಭವವನ್ನು ನಾಡಗೀತೆಯ ಮೂಲಕ ನಮಗೆ ನೀಡಿದ್ದಾರೆ. ನಾಡಗೀತೆ ರಚನೆಯಾಗಿ ನೂರು ವರ್ಷವಾದರೂ ಸಹ ಇಂದಿಗೂ ಅದು ಪ್ರಸ್ತುತ. ಅವರು ರಚಿಸಿರುವ ರೈತ ಗೀತೆಗೂ ಸಹ ನೂರು ವರ್ಷ ಪೂರೈಸಿದೆ. ರೈತನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಕವನ ಸಂಕಲನವನ್ನು ಯುಗದ ಕವಿ ಜಗದ ಕವಿ ಕುವೆಂಪು ಅವರು ನಮಗೆ ನೀಡಿದ್ದಾರೆ.
ಕುವೆಂಪು ಅವರ ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ ಇರುತ್ತಿತ್ತು. ಪ್ರತಿಯೊಬ್ಬ ಮನುಷ್ಯರು ಹುಟ್ಟಿನಿಂದಲೇ ವಿಶ್ವಮಾನವರಾಗಿ ಹುಟ್ಟುತ್ತಾರೆ ಬೆಳೆಯುತ್ತಾ ಜಾತಿ, ಧರ್ಮ, ಬಣ್ಣ ಇವುಗಳ ಸಂಕೋಲೆಗೆ ಸಿಲುಕಿ ಅಲ್ಪ ಮಾನವರಾಗಿ ಬಿಡುತ್ತಾರೆ. ನಾವೆಲ್ಲರೂ ಜಾತಿ, ಧರ್ಮ ಗಳ ಸಂಕೋಲೆಗೆ ಸಿಲುಕಿದೆ ಕುವೆಂಪು ಅವರ ಆಶಯದಂತೆ ಮನುಜ ಮತ ವಿಶ್ವಪಥದ ದಾರಿಯಲ್ಲಿ ನಡೆಯುವ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಕುವೆಂಪು ಅವರು ಮಾನವರಲ್ಲ ಒಂದೇ ಧರ್ಮ ಮನುಷ್ಯರಲ್ಲಿ ಮೇಲು-ಕೀಳು ಇಲ್ಲ ಎಂಬ ಭಾವನೆಯನ್ನು ತಮ್ಮ ಬರವಣಿಗೆಯಲ್ಲಿ ಬಿತ್ತಿದ್ದಾರೆ. ಎಲ್ಲಾ ಮಾನವರು ವಿಶ್ವಮಾನವರಾದರೂ ಪಂಚಮಂತ್ರ ಸೂತ್ರವನ್ನು ರಾಷ್ಟ್ರಕವಿ ಕುವೆಂಪು ಅವರು ನೀಡಿದ್ದಾರೆ ಅವುಗಳೆಂದರೆ ಮನುಜ ಮತ, ವಿಶ್ವಪಥ, ಸಮನ್ವಯ, ಪೂರ್ಣ ದೃಷ್ಟಿ ಮತ್ತು ಸರ್ವೋದಯ ಇದಿಷ್ಟು ಸೂತ್ರಗಳನ್ನು ನಾವು ಪಾಲಿಸಿದ್ದೆ ಆದರೆ ವಿಶ್ವ ಪಥದತ್ತ ಸಾಗಬಹುದು ಎಂದು ಹೇಳಿದರು.
ಮನುಷ್ಯರಾದ ಮೇಲೆ ಜಾತಿ, ಧರ್ಮಗಳನ್ನು ತೊರೆದು ಒಳ್ಳೆಯ ವಿಚಾರಗಳನ್ನು ಗ್ರಹಿಸಬೇಕು. ವಿಚಾರಗಳನ್ನು ಸಮನ್ವಯ ದೃಷ್ಟಿಯಿಂದ ನೋಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಸಮಗ್ರವಾಗಿ ನೋಡಬೇಕು. ಎಲ್ಲರ ಅಭಿವೃದ್ಧಿಗಾಗಿ ಸರ್ವೋದಯ ತತ್ವವನ್ನು ಅಳವಡಿಸಿಕೊಂಡು ಶ್ರಮಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಕನ್ನಡ ಎಂದರೆ ಮೊದಲು ನೆನಪಾಗುವುದು ಕುವೆಂಪು. ಸಾಕಷ್ಟು ಕವಿಗಳನ್ನು ಕನ್ನಡ ನಾಡು ಕಂಡಿದೆ ಆದರೆ ಕುವೆಂಪು ಅವರನ್ನು ನಾವು ಅಗ್ರಗಣ್ಯ ಸ್ಥಾನದಲ್ಲಿ ಕಾಣಬಹುದಾಗಿದೆ. ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ವಿಶ್ವಪಥದತ್ತ ಸಾಗೋಣ ಎಂದು ಹೇಳಿದರು.
ಕವಿ ಹಾಗೂ ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಕೆ.ಪಿ ಮೃತ್ಯುಂಜಯ ಅವರು ಮಾತನಾಡಿ ಕುವೆಂಪು ಸರ್ವೋದಯ ಎಂಬ ಪದವನ್ನು ಗಾಂಧೀಜಿ ಅವರಿಂದ ಪಡೆದಿದ್ದಾರೆ. ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುವುದೆ ಸರ್ವೋದಯ ಮಂತ್ರದ ಮೂಲ ಆಶಯ. ಕಾಯಕದಲ್ಲಿ ಯಾವ ಕಾಯಕವು ದೊಡ್ಡದಲ್ಲ ಸಮಾಜಕ್ಕೆ ಎಲ್ಲಾ ವೃತ್ತಿಯೂ ಅಗತ್ಯವೂ ಇದೆ ಎಂದು ಪ್ರತಿಪಾದಿಸಿದರು ಕುವೆಂಪು.
ನಾವು ಕುವೆಂಪು ಅವರು “ಮನುಜ ಮತ ವಿಶ್ವಪಥ” ಮಂತ್ರವನ್ನು ಅನುಸರಿಸಬೇಕು. ಅಲ್ಪ ಮನುಷ್ಯನನ್ನು ವಿಶ್ವಮಾನವ ಸಾಗಿಸಲು ಶಿಕ್ಷಣ ಅಗತ್ಯ. ಕುವೆಂಪು ಮೌಢ್ಯತೆಯನ್ನು ವಿರೋಧಿಸಿದವರು. ಕುವೆಂಪು ಸಮಾಜದಲ್ಲಿ ಯಾರೂ ಮುಖ್ಯರು ಅಲ್ಲ ಅಮುಖ್ಯರು ಅಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ. ಬಸವೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ನಗರಸಭೆ ಸದಸ್ಯ ಶ್ರೀಧರ್, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮಾಲಾರ್ಪಣೆ
ಕಾರ್ಯಕ್ರಮಕ್ಕೂ ಮುನ್ನ ವಿಶ್ವಮಾನವ ದಿನಾಚರಣೆ ಅಂಗವಾಗಿ ನಗರದ ಆರ್.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ಇರುವ ರಾಷ್ಟ್ರಕವಿ ಕುವೆಂಪು ರವರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾಲಾರ್ಪಣೆ ಮಾಡಿ ಗೌರವಿಸಿದರು.
