NEWS

ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿ. ಪಂ. ಸಿಇಒ

ಪಾಲನೆ ನ್ಯೂಸ್

ಮಂಡ್ಯ: ಸರ್ಕಾರದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ವಿವಿಧ ಕೃಷಿ ಸವಲತ್ತುಗಳು ಫಲಾನುಭವಿಗಳಿಗೆ ತಲುಪುವಂತೆ ಕೃಷಿ ಇಲಾಖೆ ವತಿಯಿಂದ ವ್ಯಾಪಕ ಅರಿವು ಮೂಡಿಸುವಂತೆ ಕ್ರಮ ವಹಿಸಬೇಕು ಎಂದು ಜಿ. ಪಂ. ಸಿಇಓ ನಂದಿನಿ ಕೆ.ಆರ್. ರವರು ಕೃಷಿ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೈತರ ಪ್ರಗತಿಗೆ ಸಹಾಯಕವಾಗುವ 9 ಪ್ರಮುಖ ಕೃಷಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.

  1. ಕೃಷಿ ಯಂತ್ರಧಾರೆ: ಯೋಜನೆಯಡಿ ಸರ್ಕಾರದಿಂದ ನೀಡಲಾಗುತ್ತಿರುವ ಯಂತ್ರೋಪಕರಣ, ಸಬ್ಸಿಡಿ ಸವಲತ್ತುಗಳ ಬಗ್ಗೆ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ರೈತರಿಗೆ ಅರಿವು ಮೂಡಿಸುವಂತೆ ಸೂಚಿಸಲಾಯಿತು. ಅರ್ಹ ರೈತರಿಗೆ ಸಕಾಲದಲ್ಲಿ ಯಂತ್ರೋಪಕರಣಗಳು ದೊರೆಯುವಂತೆ ಹಾಗೂ ಯೋಜನೆಯ ಲಾಭ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸಿಇಒ ರವರು ತಿಳಿಸಿದರು.
  2. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ: ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಸಕಾಲದಲ್ಲಿ ವಿತರಿಸುವಂತೆ ಹಾಗೂ ಯೋಜನೆಗೆ ಮೀಸಲಾದ ಅನುದಾನ ಯಾವುದೇ ಕಾರಣಕ್ಕೂ ವ್ಯತಗತವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಿಇಒ ರವರು ಸೂಚಿಸಿದರು.

ಯಂತ್ರಗಳ ಲಭ್ಯತೆ, ಬಳಕೆ ಹಾಗೂ ನಿರ್ವಹಣೆ ಕುರಿತು ಸ್ಪಷ್ಟ ಮಾಹಿತಿ ನೀಡುವ ಮೂಲಕ ರೈತರಿಗೆ ಯೋಜನೆಯ ಸಂಪೂರ್ಣ ಲಾಭ ದೊರೆಯುವಂತೆ ಅಧಿಕಾರಿಗಳು ಗಮನವಹಿಸಬೇಕು. ಹಾರ್ವೆಸ್ಟರ್‌ಗಳ ಲಭ್ಯತೆ, ಬಾಡಿಗೆ ದರ ಹಾಗೂ ಬುಕ್ಕಿಂಗ್ ವ್ಯವಸ್ಥೆಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ರೈತರ ಹೊಲದಲ್ಲಿ ಕೊಯ್ಲು ಕಾರ್ಯ ಸುಗಮವಾಗುವಂತೆ ನೋಡಿಕೊಳ್ಳಬೇಕು.

  1. ಕರ್ನಾಟಕ ರೈತ ಸಮೃದ್ಧಿ ಯೋಜನೆ: ನಾಟಿ ಮೊಟ್ಟೆ, ಸಿರಿಧಾನ್ಯ ತಿನಿಸುಗಳು, ಮಶ್ರೂಮ್, ಚಿಕ್ಕಿ, ಜೇನು ಮತ್ತು ಮದ್ದೂರು ವಡೆ ಸೇರಿದಂತೆ ಸ್ಥಳೀಯ ಕೃಷಿ ಹಾಗೂ ಆಹಾರ ಉತ್ಪನ್ನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ಈ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಗುಣಮಟ್ಟ ಸುಧಾರಣೆ, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ರೈತರ ಆದಾಯ ಹೆಚ್ಚಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು. ಯೋಜನೆಯ ಸವಲತ್ತುಗಳು ಅರ್ಹ ರೈತರಿಗೆ ತಲುಪುವಂತೆ ಗ್ರಾಮ ಸಭೆ, ರೈತ ಸಂಪರ್ಕ ಸಭೆಗಳ ಮೂಲಕ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
  2. ನೈಸರ್ಗಿಕ ಕೃಷಿ ರಾಷ್ಟ್ರೀಯ ಅಭಿಯಾನ: ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಶೀಘ್ರದಲ್ಲೇ ಕೃಷಿ ಮಾರ್ಟ್ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಒ ಅವರು ಸೂಚಿಸಿದರು. ಕೃಷಿ ಮಾರ್ಟ್ ಮೂಲಕ ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ, ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುವ ಉದ್ದೇಶ ಹಾಗೂ ರಾಸಾಯನಿಕ ರಹಿತ ಕೃಷಿಯಿಂದ ಉಂಟಾಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಿ ಹೆಚ್ಚಿನ ರೈತರು ಯೋಜನೆಯಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
  3. ಸೆಕೆಂಡರಿ ಕೃಷಿ ಯೋಜನೆ: ರೈತರಿಂದ ಉತ್ಪಾದಿಸುವ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಬಗ್ಗೆ ವಿಶೇಷ ಗಮನಹರಿಸುವಂತೆ ಸಿಇಒ ಅವರು ಸೂಚಿಸಿದರು. ಮೌಲ್ಯವರ್ಧನೆ ಮಾಡಲು ಇರುವ ಸರ್ಕಾರದ ಸವಲತ್ತುಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ ಸಂಸ್ಕರಣೆ, ಸಂಗ್ರಹಣೆ ಹಾಗೂ ಮಾರುಕಟ್ಟೆ ಸಂಪರ್ಕದ ಸೌಲಭ್ಯಗಳನ್ನು ಬಳಸಿಕೊಂಡು ರೈತರ ಆದಾಯ ಹೆಚ್ಚಿಸುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು.
  4. ಕೃಷಿ ಪ್ರಶಸ್ತಿ ಯೋಜನೆ: ಸರ್ಕಾರದಿಂದ ನೀಡಲಾಗುತ್ತಿರುವ ಪ್ರೋತ್ಸಾಹ ಮತ್ತು ಗೌರವದ ಬಗ್ಗೆ ರೈತರಿಗೆ ಹೆಚ್ಚೆಚ್ಚು ಅರಿವು ಮೂಡಿಸಿ, ಉತ್ತಮ ಕೃಷಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವಂತೆ ತಿಳಿಸಿದರು. ಜಿಲ್ಲೆಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಭತ್ತ ಹಾಗೂ ರಾಗಿ ಬೆಳೆಗೆ 3 ಪ್ರಶಸ್ತಿ ಲಭಿಸಿದ್ದು(ರಾಜ್ಯ ಮಟ್ಟ ಮಹಿಳೆ ಹಾಗೂ ರಾಜ್ಯ ಮಟ್ಟ ಪುರುಷ), ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರೈತರು ಉತ್ತಮ ಇಳುವರಿ ಹಾಗೂ ಉತ್ತಮ ಕೃಷಿ ಸಾಧನೆ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಗಳಿಸುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತಿಳಿಸಿದರು.
  5. ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನ ಕಾರ್ಯಕಾರಿ ಸಮಿತಿ: ಆಹಾರ ಉತ್ಪಾದನೆ ಹಾಗೂ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಿ ರೈತರನ್ನು ಕರೆಸಿ ಬಿತ್ತನೆ ಕೆಲಸವನ್ನು ಸಕಾಲದಲ್ಲಿ ಕೈಗೊಳ್ಳುವಂತೆ ಸೂಚಿಸಿದರು.

ಮಲ್ಟಿ ಕ್ರಾಪಿಂಗ್‌ಗೆ ಆಸಕ್ತಿ ಇರುವ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜೊತೆಗೆ ಪೌಷ್ಟಿಕತೆಯ ದೃಷ್ಟಿಯಿಂದ ಮಹತ್ವ ಹೊಂದಿರುವ ಕಡಲೆಕಾಯಿ ಹಾಗೂ ಎಳ್ಳು ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ತಿಳಿಸಿದರು.

  1. ಜಿಲ್ಲಾ ಮಟ್ಟದ ಆತ್ಮ ಚಾಲನಾ ಸಮಿತಿ: ಸರ್ಕಾರದಿಂದ ಒದಗಿಸಲಾಗುತ್ತಿರುವ ತರಬೇತಿ, ತಾಂತ್ರಿಕ ಸಹಾಯ ಹಾಗೂ ರೈತ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಿ, ರೈತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
  2. ಕೃಷಿ ಭಾಗ್ಯ ಯೋಜನೆ: ನೀರಾವರಿ ಹಾಗೂ ಮಳೆನೀರು ಸಂಗ್ರಹ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ತಿಳಿಸಿ, ಯೋಜನೆಯ ಸೌಲಭ್ಯಗಳು ಅರ್ಹ ರೈತರಿಗೆ ತಲುಪುವಂತೆ ಹಾಗೂ ರೈತರ ಕೃಷಿ ಉತ್ಪಾದನೆ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಿಇಒ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೈತರಿಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಯೋಜನೆಗಳ ಸವಲತ್ತುಗಳ ಬಗ್ಗೆ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಿ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಅಶೋಕ್, ಉಪ ಕೃಷಿ ನಿರ್ದೇಶಕರುಗಳಾದ ಮುನೇಗೌಡ, ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಹರ್ಷ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಿಖಿಲ್ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಹಾದಿ-ಬೀದೀಲಿ ಚರ್ಚೆ ಬೇಡ

ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಜನಗಣತಿ

ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ

Leave a Comment