NEWS

ಕರ್ನಾಟಕ ಸಂಘ: ಪ್ರಭುಲಿಂಗಲೀಲೆ ಕಾವ್ಯಾನುಸಂಧಾನ ಫೆ. 28ಕ್ಕೆ

ಪಾಲನೆ ನ್ಯೂಸ್

ಮಂಡ್ಯ: ಕರ್ನಾಟಕ ಸಂಘದ ಮಹಿಳಾ ಘಟಕದ ವತಿಯಿಂದ ಫೆಬ್ರವರಿ 28 ಶನಿವಾರ ಸಂಜೆ 4.30 ಗಂಟೆಗೆ ಕಾವ್ಯಾನುಸಂಧಾನ  ನಡೆಯಲಿದ್ದು, ಈ ಬಾರಿ ಚಾಮರಸ ಕವಿಯ ಪ್ರಭುಲಿಂಗಲೀಲೆ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಟಿ ಕೆ ಕೆಂಪೇಗೌಡ ಅವರು ಚಾಮರಸನ ಪ್ರಭುಲಿಂಗಲೀಲೆ ಕೃತಿಯನ್ನು ಅನುಸಂಧಾನಗೊಳಿಸಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ  ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಾಗರೇವಕ್ಕ ಸಂಚಾಲಕರಾದ ಡಾ. ದೇವಿಕ ಎನ್. ಎಸ್. ಮತ್ತಿತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿರುವರು. ಕಾವ್ಯಾಸಕ್ತರು ಮುಕ್ತ ಸಂವಾದದಲ್ಲಿ ಪಾಲ್ಗೊಳ್ಳಬಹುದು ಎಂದು ಮಹಿಳಾ ಘಟಕದ ಕಾರ್ಯದರ್ಶಿ ಡಾ. ಎಂ.ಎಸ್. ಅನಿತಾ ಮಂಗಲ ತಿಳಿಸಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ  ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಚಾಮರಸ ಕವಿಯು ತನ್ನ ಪ್ರಭುಲಿಂಗಲೀಲೆ ಕೃತಿಯಲ್ಲಿ  ಅಪೂರ್ವವಾದ ರೀತಿಯಲ್ಲಿ ಚಿತ್ರಿಸಿದ್ದಾನೆ.

ಪ್ರಭುಲಿಂಗಲೀಲೆ (15ನೇ ಶತಮಾನ) ಕವಿ ಚಾಮರಸನು ಬರೆದ ಕನ್ನಡದ ಶ್ರೇಷ್ಠ ನಡುಗನ್ನಡ ವೀರಶೈವ ಮಹಾಕಾವ್ಯ. ಇದು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದ್ದು, ಅಲ್ಲಮಪ್ರಭುವಿನ ಜೀವನ, ವೈರಾಗ್ಯ ಮತ್ತು ಆಧ್ಯಾತ್ಮಿಕ ಲೀಲೆಗಳನ್ನು ವರ್ಣಿಸುತ್ತದೆ. ವಿಜಯನಗರದ ಪ್ರೌಢದೇವರಾಯನ ಆಸ್ಥಾನದಲ್ಲಿದ್ದ ಚಾಮರಸ, ಈ ಕೃತಿಯಲ್ಲಿ ಅಲ್ಲಮಪ್ರಭು ಶಿವನ ಅಂಶವೆಂದು ಚಿತ್ರಿಸಿ, ಅವರ ಭಕ್ತಿ-ತತ್ವಜ್ಞಾನವನ್ನು ಅನಾವರಣಗೊಳಿಸಿದ್ದಾರೆ.

Related posts

ಮತ್ತೆ ಚಿನ್ನ, ಬೆಳ್ಳಿ ಬೆಲೆ ಏರಿಕೆ ₹3 ಲಕ್ಷದ ಗಡಿ ದಾಟಿದ ಬೆಳ್ಳಿ! ಚಿನ್ನದ ಬೆಲೆ ₹1.73 ಲಕ್ಷಕ್ಕೆ ಏರಿಕೆ

ಬಾಲ್ಯವಿವಾಹ ಮುಕ್ತ ಮಂಡ್ಯ ಜಿಲ್ಲೆಯ ಅಭಿಯಾನ

ಎಲ್ಲ ರಾಜ್ಯಕ್ಕೂ ಶೇ.50 ಸ್ಥಾನ ಹೆಚ್ಚಳ ನಿಶ್ಚಿತ | ಕರ್ನಾಟಕಕ್ಕೆ 42 ಲೋಕಸಭಾ ಕ್ಷೇತ್ರ!

Leave a Comment