NEWS

ಈಗ ಉಪದೇಶವಲ್ಲ; ಉದಾಹರಣೆ ಬೇಕು

ಪಾಲನೆ ಚಿಂತನ

ಉಪದೇಶವನ್ನು ಎಷ್ಟೇ ಹೇಳಿದರೂ ಅದು ನಮ್ಮ ಮೇಲೆ ಪರಿಣಾಮ ಉಂಟು ಮಾಡಲಾರದು. ಮಾಡಿದ ಕೆಲಸವನ್ನು ಕಂಡು ನಾವು ಅದರಿಂದ ಪ್ರಭಾವಿತರಾಗುತ್ತೇವೆ. ಉದಾಹರಣೆಯೆನಿಸುವ ಒಂದು ಔಂಸು ಕೆಲಸವು ಒಂದು ಪೌಂಡು ಉಪದೇಶಕ್ಕಿಂತಲೂ ಹೆಚ್ಚು ಪರಿಣಾಮ ಬೀರುತ್ತದೆ.

ಜಗತ್ತಿನಲ್ಲಿ ಜನರು ಉದಾಹರಣೆಯಿಂದ ಕಲಿಯುವವರಲ್ಲದೆ ಬೇರೆ ಯಾವುದರಿಂದಲೂ ಕಲಿಯುವುದಿಲ್ಲ. ನಿದರ್ಶನವೆನಿಸುವ ನಡೆಯಿಂದ ಜನರು ಹೆಚ್ಚು ಕಲಿಯುತ್ತಾರೆ. ಉದಾಹರಣೆಯೆನಿಸುವ ಪಾಠಶಾಲೆಯಿಂದ ಕಲಿಯುವಂತೆ, ಜನರು ಬೇರೆ ಯಾವ ಪಾಠಶಾಲೆಯಿಂದಲೂ ಕಲಿಯಲಾರರು.

ಕೊಕ್ಕರೆಯ ಕೂಗನ್ನು ಕೇಳಿ ಕೊಕ್ಕರೆಗಳು ಆಕಾಶಕ್ಕೆ ಹಾರುವುದಿಲ್ಲ. ಆದರೆ, ಅವು ಕೊಕ್ಕರೆ ಹಾರುವುದನ್ನು ಕಂಡು, ಅದನ್ನು ಹಿಂಬಾಲಿಸಿ ಹೋಗುತ್ತವೆ. ಹಾರಾಡುವ ಪಕ್ಷಿ, ಬೇರೆ ಪಕ್ಷಿಗಳನ್ನು ಹಾರಾಟ ಮಾಡಲು ತನ್ನೊಂದಿಗೆ ಕರೆದುಕೊಳ್ಳುತ್ತದೆ. ಉದಾಹರಣೆಯಂತೆ ಬೇರೆ ಯಾವುದೂ ನಮ್ಮನ್ನು ಉದ್ದೀಪನಗೊಳಿಸುವುದಿಲ್ಲ.

ಜಗತ್ತು ಹಣದಿಂದ ಮುಂದೆ ಹೋಗಿದೆಯೇನು ಎಂದು ಸುಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ ಸ್ಟೀನ್ ಕೇಳಿದ್ದಾರೆ. ಉದಾತ್ತವಾದ ವಿಚಾರಕ್ಕೆ, ಕಾರ್ಯಕ್ಕೆ ಉಹಾಹರಣೆ ಎನಿಸುವ ಜನರು ಪ್ರೇರಣೆ ಒದಗಿಸಿದ್ದಾರೆ. ಅಂಥ ಜನರಿಂದಲೇ ಮಾನವಕುಲ ಮುಂದಕ್ಕೆ ಹೋಗಿದೆಯೆಲ್ಲದೆ ಬೇರೆ ಯಾವುದರಿಂದಲೂ ಅಲ್ಲ.

ಹಣದಲ್ಲಿ ಸ್ವಾರ್ಥ ಇದೆ. ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ನಿದರ್ಶನವೆನ್ನುವ ಪದ ಇದು ಯಾವುದೂ ಇಲ್ಲ. ಮೋಜಸ್, ಜೀಸಸ್ ಇಲ್ಲವೆ ಗಾಂಧಿ ಬಳಿಯಲ್ಲಿ ಕಾರ್ನೀಗಿಯ ಹಣದ ಚೀಲಗಳಿದ್ದವೇನು? ಎಂದು ಐನ್‌ ಸ್ಟೀನ್ ಕೇಳುತ್ತಾರೆ.

ಜನರು ತಾವು ಕಂಡುದುದನ್ನು ನಂಬುವಂತೆ ಕೇಳಿದುದನ್ನು ನಂಬುವುದಿಲ್ಲ. ಉದಾಹರಣೆಯು ತಕ್ಷಣವೇ ಪರಿಣಾಮ ಬೀರುವಂತೆ, ಉಪದೇಶವು ಪರಿಣಾಮ ಬೀರಲಾರದು. ಉಪದೇಶವು ಜನರೊಳಗೆ ಇಳಿದು ಬೇರು ಬಿಡುವುದಕ್ಕೆ ಸಮಯ ಬೇಕಾಗುತ್ತದೆ. ಆದರೆ ಉದಾಹರಣೆಯು ಒಮ್ಮೆಲೇ ಬೇರು ಹಿಡಿದು, ಚಿಗಿತು, ಹೂವು, ಕಾಯಿ, ಹಣ್ಣುಗಳನ್ನು ಕೊಡುತ್ತದೆ.

ಜೀವನದಲ್ಲಿ ಉದಾಹರಣೆಯೊಂದೇ ಮುಖ್ಯ. ಬೇರೆ ಯಾವುದೂ ಅಲ್ಲವೆಂದು ಮಹಾ ಮಾನವ ಆಲ್ಬರ್ಟ್ ಸ್ಟೀನ್ ರು ಹೇಳುತ್ತಿದ್ದರು. ಕಾರ್ಯ ಮಾಡುವ ಸಿದ್ಧಾಂತವೇ ಜಗತ್ತಿಗೆಲ್ಲ ಕಾನೂನೆನಿಸಿದರೆ, ಜಗತ್ತಿನ ಎಲ್ಲೆಡೆಗಳಲ್ಲಿಯೂ ಸ್ವರ್ಗವೇ ನಿರ್ಮಾಣಗೊಳ್ಳುತ್ತದೆ.


(ಕೃಪೆ: ಬದುಕಲು ಬೇಕು ಬದುಕುವ ಈ ಮಾತು ಕೃತಿ. ಲೇಖಕರು: ಡಾ. ಪಾಟೀಲ್ ಪುಟ್ಟಪ್ಪ (14 ಜನವರಿ 1921 – 16 ಮಾರ್ಚ್ 2020). ಪತ್ರಕರ್ತ, ಸಾಹಿತಿ, ಕನ್ನಡ ಪರ ಹೋರಾಟಗಾರ. ಕನ್ನಡಿಗರೆಲ್ಲರಿಗೂ `ಪಾಪು’ ಎಂದೇ ಚಿರಪರಿಚಿತರು. ವಿಶಾಲ ಕರ್ನಾಟಕ ದಿನಪತ್ರಿಕೆ, ನವಯುಗ ಮಾಸ ಪತ್ರಿಕೆ ಸಂಪಾದಕರಾಗಿದ್ದರು.1954ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1957ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟ್ ಪ್ರಾರಂಭಿಸಿದರು. 1959ರಲ್ಲಿ ವಿಶ್ವವಾಣಿ ದೈನಿಕ, ಮನೋರಮಾ ಎಂಬ ಚಲನಚಿತ್ರ ಮಾಸಿಕ ಆರಂಭಿಸಿದರು.)

Related posts

ಮನೆಗೊಂದು ಗ್ರಂಥಾಲಯ: ಲಕ್ಷ ಗ್ರಂಥಾಲಯಗಳ ಯೋಜನೆ

ಕೂಳಗೆರೆ ಗ್ರಾ.ಪಂಗೆ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳು ಮುತ್ತಿಗೆ ಹಾಕಿ ವಿವಿಧಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

ಪಂಜಿನ ಮೆರವಣಿಗೆ ಮಾಡಿದ ರೈತ ಸಂಘದವರು

Leave a Comment