NEWS

ಸ್ಮೃತಿ ಪಡೆಗೆ 2ನೇ ಪ್ರಶಸ್ತಿ ತವಕ | ಕ್ಯಾಪಿಟಲ್ಸ್‌ಗೆ ಒಲಿಯುವುದೇ ಲಕ್?

ಇಂದು ಆರ್‌ಸಿಬಿ ಡೆಲ್ಲಿ ಫೈನಲ್ ಫೈಟ್

ಪಾಲನೆ ನ್ಯೂಸ್

ವಡೋದರ: ಎರಡನೇ ಬಾರಿಗೆ ಟ್ರೋಫಿ ಒಲಿಸಿಕೊಳ್ಳುವ ಹಂಬಲದಲ್ಲಿರುವ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸತತ 4ನೇ ಪ್ರಯತ್ನದಲ್ಲಾದರೂ ಪ್ರಶಸ್ತಿ ಜಯಿಸುವ ತವಕದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವುಮೆನ್ಸ್ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯಲ್ಲಿ ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ವಡೋದರ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾದಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ನಿರೀಕ್ಷೆಯಿದೆ.

42 ಆವೃತ್ತಿಯಲ್ಲಿ ಅಧಿಕಾರಯುತ ಆಟವಾಡುವ ಮೂಲಕ ಲೀಗ್ ಹಂತದ ಆರಂಭದಿಂದಲೂ ಅಂತ್ಯದವರೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಆರ್‌ಸಿಬಿ ತಂಡ ನೇರವಾಗಿ ಫೈನಲ್‌ಗೇರಿದರೆ, ಟೂರ್ನಿಯಲ್ಲಿ ಏರಿಳಿತ ಕಂಡ ಡೆಲ್ಲಿ ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ಎದುರು ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದೆ. ಸ್ಮೃತಿ ಮಂದನಾ ಪಡೆ 2024ರ ಆವೃತ್ತಿಯ ಫೈನಲ್‌ನಲ್ಲಿ ಡೆಲ್ಲಿಯನ್ನು ಮಣಿಸಿದ ಹುಮ್ಮಸ್ಸಿನಲ್ಲಿದೆ. ಜೆಮೀಮಾ ರೋಡ್ರಿಗಸ್ ಪಡೆ ಹಿಂದಿನ ಮೂರು ಆವೃತ್ತಿಯ ತಪ್ಪು ತಿದ್ದಿಕೊಂಡು ಚೊಚ್ಚಲ ಕಿರೀಟ ಜಯಿಸುವ ಹಂಬಲದಲ್ಲಿದೆ. ಲೀಗ್ ಹಂತದ ಎರಡೂ ಮುಖಾಮುಖಿಗಳಲ್ಲಿ ಉಭಯ ತಂಡಗಳು ತಲಾ ಒಮ್ಮೆ ಗೆಲುವು-ಸೋಲು ಕಂಡಿವೆ. ಕಳೆದ ನವೆಂಬರ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದ ಪ್ರಮುಖ ಆಟಗಾರರು ಎರಡೂ ತಂಡಗಳಲ್ಲಿದ್ದಾರೆ. ಇದುವರೆಗಿನ ಮೂರು ಆವೃತ್ತಿಯಲ್ಲಿ ಎಲಿಮಿನೇಟರ್ ಪಂದ್ಯ ವಿಜೇತ ತಂಡವೇ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ ಎಂಬುದು ಗಮನಾರ್ಹ.

ಆರ್‌ಸಿಬಿ ತಂಡ ಗೆದ್ದರೆ ಡಬ್ಲ್ಯುಪಿಎಲ್‌ನಲ್ಲಿ 2 ಬಾರಿ ಪ್ರಶಸ್ತಿ ಗೆದ್ದ ಎರಡನೇ ತಂಡ ಎನಿಸಲಿದೆ. ಮುಂಬೈ ಇಂಡಿಯನ್ಸ್ (2023, 2025) ಈ ಸಾಧನೆ ಮಾಡಿರುವ ಮೊದಲ ತಂಡ.

ಟೂರ್ನಿಯ ಚಾಂಪಿಯನ್ ತಂಡ 6 ಕೋಟಿ ರೂ. ಬಹುಮಾನ ಗಳಿಸಿದರೆ, ರನ್ನರ್‌ ಅಪ್ ತಂಡ 3 ಕೋಟಿ ರೂ. ಪಡೆಯಲಿದೆ.

ಮುಖಾಮುಖಿ: 9

ಆರ್‌ಸಿಬಿ: 3

ಡೆಲ್ಲಿ ಕ್ಯಾಪಿಟಲ್ಸ್: 6

ಕ್ಯಾಪಿಟಲ್ಸ್‌ಗೆ ಆರಂಭಿಕರ ಬಲ

ಡೆಲ್ಲಿ ತಂಡಕ್ಕೆ ಲಿಜೆಲ್ ಲೀ ಮತ್ತು ಶೆಫಾಲಿ ವರ್ಮ ಆರಂಭಿಕ ಜೋಡಿಯ ಆಟವೇ ನಿರ್ಣಾಯಕ ಎನಿಸಿದೆ. ಶೆಫಾಲಿ ವರ್ಮ ಟೂರ್ನಿಯಲ್ಲಿ 1 ಅರ್ಧ ಶತಕ ಸಹಿತ 239 ರನ್‌ಗಳಿಸಿದರೆ, ಲಿಜೆಲ್ ಲೀ 283 ರನ್ ಕಲೆಹಾಕಿದ್ದಾರೆ. ಲೌರಾ ವೋಲ್ವಾರ್ಡ್ (273), ಜೆಮೀಮಾ ರೋಡ್ರಿಗಸ್ (207) ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ. ಹಾಲಿ ಆವೃತ್ತಿಯಲ್ಲಿ ಹ್ಯಾಟ್ರಿಕ್ ದಾಖಲಿಸಿರುವ ನಂದನಿ ಶರ್ಮ (16 ವಿಕೆಟ್) ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ.

ಆರ್‌ಸಿಬಿಗೆ ಹ್ಯಾಟ್ರಿಕ್ ಪ್ರಶಸ್ತಿಯ ಅವಕಾಶ!

ಸ್ಮೃತಿ ಮಂದನಾ ಪಡೆ 4ನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದರೆ ಆರ್‌ಸಿಬಿ ಫ್ರಾಂಚೈಸಿ (ಐಪಿಎಲ್-ಡಬ್ಲ್ಯುಪಿಎಲ್ ಸೇರಿ) ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಲಿದೆ. ಆರ್‌ಸಿಬಿ ಮಹಿಳಾ ತಂಡ 2024ರಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಜಯಿಸಿದ್ದು, ಕಳೆದ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ 18 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿದೆ. ಸ್ಮೃತಿ ಮಂದನಾ ಬಳಗವೂ ಟ್ರೋಫಿ ಗೆದ್ದರೆ, ಏಕಕಾಲದಲ್ಲಿ ಪುರುಷರ-ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಎನಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಯೂ ಆರ್‌ಸಿಬಿ ತಂಡದ್ದಾಗಲಿದೆ.

ಡಿ ಕ್ಲರ್ಕ್, ಬೆಲ್ ಟ್ರಂಪ್ ಕಾರ್ಡ್

ಆಲೌಂಡರ್ ನಾಡಿನ್ ಡಿಕ್ಲರ್ಕ್ ಹಾಗೂ ವೇಗಿ ಲಾರೆನ್ ಬೆಲ್ ಆರ್‌ಸಿಬಿ ತಂಡದ ಪ್ರಮುಖ ಟ್ರಂಪ್ ಕಾರ್ಡ್ ಎನಿಸಿದ್ದಾರೆ. ಬೆಲ್ 8 ಇನಿಂಗ್ಸ್‌ಗಳಲ್ಲಿ 12 ವಿಕೆಟ್ ಕಬಳಿಸಿದರೆ, 15 ವಿಕೆಟ್ ಪಡೆದಿರುವ ಡಿ ಕ್ಲರ್ಕ್, ಗರಿಷ್ಠ ವಿಕೆಟ್ ಟೇಕರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂದನಾ 290 ರನ್ ಕಲೆಹಾಕಿದ್ದು, ಇನ್ನು 53 ರನ್‌ಗಳಿಸಿದರೆ ಆರೆಂಜ್ ಕ್ಯಾಪ್ ತನ್ನದಾಗಿಸಿ ಕೊಳ್ಳಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ (11) ಸಹ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

Karnataka Politics | ಅಧಿವೇಶನ ಬಳಿಕ ಸಂದೇಶ: ಡಿಕೆಶಿ ಬಣ ವಿಶ್ವಾಸ

ಪ್ರಕೃತಿ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ

Leave a Comment