NEWS

ರೈತರ ಅಭಿವೃದ್ಧಿಗಾಗಿ ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯ ತರಲಾಗಿದೆ

2 ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಕೃಷಿ ಯಂತ್ರೋಪಕರಣಗಳ ವಿತರಣೆ ರಾಜ್ಯದಲ್ಲಿ 400 ಕ್ಕೂ ಹೈಟೆಕ್ ಹಾರ್ವೆಸ್ಟ್ ಹಬ್ ಯಂತ್ರಗಳನ್ನು ರೈತರಿಗೆ ನೀಡಲಾಗಿದೆ : ಎನ್ ಚೆಲುವರಾಯಸ್ವಾಮಿ

ಪಾಲನೆ ನ್ಯೂಸ್

ಮಂಡ್ಯ: ರೈತರ ಅಭಿವೃದ್ಧಿಗಾಗಿ ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯ ತರಲಾಗಿದೆ ಜಿಲ್ಲೆಯ ರೈತರು ಕೃಷಿ ವಿಶ್ವವಿದ್ಯಾನಿಲಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.

ಇಂದು ಕೃಷಿ ಇಲಾಖೆಯ ವತಿಯಿಂದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಹೈಟೆಕ್ ಹಾರ್ವೆಸ್ಟ್ ಹಬ್ ಮತ್ತು ಸೆಕೆಂಡರಿ ಕೃಷಿ ಯೋಜನೆಗಳ ರೈತ ಫಲಾನುಭವಿಗಳಿಗೆ ಯಂತ್ರೋಪಕರಣಗಳ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ 2 ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ರಾಜ್ಯದ ರೈತರಿಗೆ ನೀಡಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ವರ್ಗಗಳಿಗೆ ರೂ 50 ಲಕ್ಷ ಮತ್ತು ಸಾಮಾನ್ಯ ವರ್ಗಗಳಿಗೆ ರೂ 40 ಲಕ್ಷ ಸಬ್ಸಿಡಿಯನ್ನು ದರದಲ್ಲಿ ಹೈಟೆಕ್ ಹಾರ್ವೆಸ್ಟ್ ಹಬ್ ಖರೀದಿಸಲು ನೀಡಲಾಗುತ್ತಿದೆ. ದೇಶದ ಯಾವುದೇ ರಾಜ್ಯದಲ್ಲೂ ಸದರಿ ಯೋಜನೆ ಇಲ್ಲ ಎನ್ನಬಹುದು. ಹೈಟೆಕ್ ಹಾರ್ವೆಸ್ಟ್ ಹಬ್ನ ಸಂಪೂರ್ಣ ಯೋಜನೆ ರಾಜ್ಯ ಸರ್ಕಾರದ್ದಾಗಿದೆ, ರಾಜ್ಯದಲ್ಲಿ 400 ಕ್ಕೂ ಹೈಟೆಕ್ ಹಾರ್ವೆಸ್ಟ್ ಹಬ್ ಯಂತ್ರಗಳನ್ನು ರೈತರಿಗೆ ನೀಡಲಾಗಿದೆ ಎಂದು ಹೇಳಿದರು.

ವಿವಿಧ ಬೆಳೆಗಳ ಕಟಾವಿಗೆ ಹೈಟೆಕ್ ಹಾರ್ವೆಸ್ಟ್ ಹಬ್ ಯಂತ್ರಗಳು ಉಪಯುಕ್ತವಾಗಿದೆ. ಕೃಷಿ ಕೆಲಸಗಳಿಗೆ ಮಾನವ ಸಂಪನ್ಮೂಲ ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ಈ ಯಂತ್ರೋಪಕರಣಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬೆಳೆಗಳನ್ನು ಕಟಾವು ಮಾಡಬಹುದಾಗಿದೆ ಹಾಗೂ ರೈತನಿಗೆ ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ನಾನು ಕೃಷಿ ಸಚಿವನಾಗಿ ರೈತರಿಗೆ ಕೃಷಿ ತಾಂತ್ರಿಕ ತರಬೇತಿ ಹಾಗೂ ಯಂತ್ರೋಪಕರಣಗಳ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇನೆ ಎಂದು ಹೇಳಿದರು.

ನಮ್ಮ ಸರ್ಕಾರ ಬರುವ ಮೊದಲು 12 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ವಿಮೆ ತೆಗೆದುಕೊಂಡಿದ್ದರು ಆದರೆ ಇಂದು 28 ಲಕ್ಷಕ್ಕೂ ಅಧಿಕ ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸಿದ್ದಾರೆ. ವಿಮೆಯಲ್ಲಿ ಸರಿಸುಮಾರು 6,000 ಕೋಟಿಗೂ ಹೆಚ್ಚು ಹಣವನ್ನು ನೀಡಲಾಗಿದೆ ಎಂದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿ ಚೆಲುವರಾಯಸ್ವಾಮಿ ಅವರು ಕೃಷಿ ಸಚಿವರಾದ ನಂತರ ರಾಜ್ಯದ ರೈತರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಆರ್ ನಂದಿನಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೈಟೆಕ್ ಹಾರ್ವೆಸ್ಟ್ ಹಬ್ ಯಂತ್ರಗಳ ವಿತರಣೆ

ನಂತರ ಅರ್ಹ ಫಲಾನುಭವಿಗಳಿಗೆ 13 ಹೈಟೆಕ್ ಹಾರ್ವೆಸ್ಟ್ ಹಬ್ ಯಂತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹಸ್ತಾಂತರಿಸಿದರು.

ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಆರ್ ನಂದಿನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಾಥ್ ನೀಡಿದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುವಜನತೆಯು ಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ – ಎನ್.ಚಲುವರಾಯಸ್ವಾಮಿ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ : ದಾಸಪ್ಪ

ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಭಗವಾನ್ ಬುದ್ಧ

Leave a Comment