NEWS

ಮಹಿಳಾ ದಿನದಂದು ಜವಾಬ್ದಾರಿಯನ್ನೂ ನೆನಪಿಸಿಕೊಳ್ಳಬೇಕು : ಪ್ರೊ. ಎಂ. ಶ್ರೀಲತಾ

ಹೆಚ್. ಆರ್. ಕನ್ನಿಕ ಅವರ ಪ್ರಥಮ ಕಾದಂಬರಿ ನೀ ಮಾಯೆಯೋ ನಿನ್ನೊಳು ಮಾಯೆಯೋ ಲೋಕಾರ್ಪಣೆ


ಪಾಲನೆ ನ್ಯೂಸ್
ಮಂಡ್ಯ: ಮಹಿಳಾ ದಿನಾಚರಣೆ ಅನ್ನೋದು ಹೋರಾಟದ ನೆನಪು. ಮಹಿಳಾ ದಿನದ ಹಿನ್ನೆಲೆಯಲ್ಲಿ ಸಂಭ್ರಮ, ಸಡಗರದ ಜತೆಗೆ ಜವಾಬ್ದಾರಿಯನ್ನು ನೆನಪು ಮಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಂ. ಶ್ರೀಲತಾ ತಿಳಿಸಿದರು.

ನಗರದ ಕನ್ನಿಕ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ,
ಹೆಚ್.ಆರ್. ಕನ್ನಿಕ ಅವರ ಪ್ರಥಮ ಕಾದಂಬರಿ ನೀ ಮಾಯೆಯೋ ನಿನ್ನೊಳು ಮಾಯೆಯೋ ಲೋಕಾರ್ಪಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಮಹಿಳೆಯರು ವಿದ್ಯಾವಂತರಾಗಿ ಹಲವು ಅವಕಾಶಗಳನ್ನು ತಮ್ಮದಾಗಿಸಿಕೊಂಡರೂ ಸವಾಲುಗಳನ್ನು  ಎದುರಿಸಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕುಟುಂಬದಲ್ಲಿ ಬಂದಿಯಾಗಿದ್ದ ಮಹಿಳೆ ನಂತರ ಸಂವಿಧಾನದ ಕಾರಣಕ್ಕೆ ಸ್ವತಂತ್ರಳಾಗಿದ್ದಾಳೆ. ಸಾಕಷ್ಟು ಸುಧಾರಣೆ ಕಂಡಿದ್ದರೂ ಆರ್ಥಿಕ ಸ್ವಾತಂತ್ರ್ಯ ಇಲ್ಲ ಎಂಬುದು ವಿಷಾದನೀಯ ಎಂದರು.

ಇಂದು ಕಾಲೇಜಿನಲ್ಲಿ ಗಂಡು ಮಕ್ಕಳೇ ಅಲ್ಪಸಂಖ್ಯಾತರಾಗಿದ್ದಾರೆ. ಹೆಣ್ಣು ಮಕ್ಕಳು ಆಸ್ತಿ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇಂದು ಎಷ್ಟು ಹೆಣ್ಣು ಮಕ್ಕಳ ಹೆಸರಿನಲ್ಲಿ ಆಸ್ತಿ ಇದೆ? ನಾವು ಸಾಮಾಜಿಕ ಸಂಕ್ರಮಣ ಕಾಲದಲ್ಲಿ ಇದ್ದೇವೆ. ಕೌಟುಂಬಿಕ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿದೆ. ಗಂಡು ಹೆಣ್ಣಿನ ತಾರತಮ್ಯ ತೊಲಗಲಿದೆ ಎಂದು ಅಭಿಪ್ರಾಯಪಟ್ಟರು.

ಹೆಣ್ಣು ದೈಹಿಕವಾಗಿ ದುರ್ಬಲಳು ಇರಬಹುದು. ಆದರೆ ಉಳಿದಂತೆ ಸಬಲಳು. ದುಡಿಮೆ ಇಲ್ಲದೆ ತಿನ್ನುವುದು ಆತ್ಮ ವಂಚನೆ. ನನ್ನ ಮಗಳಿಗೆ ಏನೂ ಗೊತ್ತಿಲ್ಲ ಅನ್ನುವುದೇ ಅವಳನ್ನು ದುರ್ಬಲಳನ್ನಾಗಿಸುವುದು. ಇದು ನೆಗಟಿವಿಟಿ. ಇಂತಹ ಪೋಷಕರು ಇದ್ದಾರೆಂದರೆ ಓದಿನ ಉಪಯೋಗ ಏನು ಎಂದು ಪ್ರಶ್ನಿಸಿದರು.

ನಮಗಿಂತ ಮಕ್ಕಳು ಹೆಚ್ಚು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಅರಿತು ಬದುಕು ಬೇಕು ಎಂದು ಸಲಹೆ ನೀಡಿದರು.

ಕೃತಿ ಬಿಡುಗಡೆ ಮಾಡಿದ ಮಳವಳ್ಳಿ ಶಾಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಅನಿತಾ ಸಿ. ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪುಸ್ತಕ ಪ್ರಕಟವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಾ ದೈವ ಭಕ್ತಿ, ಕಾಯಕ ಹಾಗೂ ಬೌದ್ಧಿಕ ಶಕ್ತಿಯ ಪ್ರಭಾವವನ್ನು ಪುಷ್ಟೀಕರಿಸಿ ಕಾದಂಬರಿ ನಿರೂಪಣೆ ಮಾಡಲಾಗಿದೆ. ಓದುವ ಸಂಸ್ಕೃತಿಯ ಮಹತ್ವ ಸಾರಿದೆ ಎಂದು ತಿಳಿಸಿದರು.

ಮಾಯೆ ಅಂದರೆ, ಭ್ರಮೆ, ಅಪೇಕ್ಷೆ, ನಾನು ಎಂಬರ್ಥವಿದೆ. ಸಂಸ್ಕಾರವಿಲ್ಲದ ನಮಸ್ಕಾರಕ್ಕೆ ಬೆಲೆ ಇಲ್ಲ. ವಿದ್ಯಾರ್ಥಿಗಳಲ್ಲಿ ಅಂತಹ ಸಂಸ್ಕಾರ ಕಡಿಮೆಯಾಗುತ್ತಿದೆ. ತಂದೆ ತಾಯಿ ಭೂಮಿ ಹಾಗೂ ಗುರುವಿನ ಋಣವನ್ನು ತೀರಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಎಂಐಟಿ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಜಿ. ಉಷಾರಾಣಿ ಮಾತನಾಡಿ, ಕಾದಂಬರಿ ಬರೆಯುವುದು ಸುಲಭವಲ್ಲ. ಅದು ಹತ್ತಾರು ಪಾತ್ರಗಳ ಚಿತ್ರಣ. ಮಾನಸಿಕ ತೊಳಲಾಟ, ಗೊಂದಲ, ಸಂಘರ್ಷಗಳ ಸೃಷ್ಟಿ ಕ್ರಿಯೆ. ಅಂತಹ ಸಾಹಸ ಕನ್ನಿಕ ಮಾಡಿದ್ದಾರೆ ಎಂದು ತಿಳಿಸಿದರು.

ಕೃತಿ ಕರ್ತೃ ಹೆಚ್. ಆರ್. ಕನ್ನಿಕ ಮಾತನಾಡಿ, ನನ್ನ ದೃಷ್ಟಿಯಲ್ಲಿ ಸತ್ಯ ಅಂದ್ರೆ ಧರ್ಮ. ಇಂದು ಮಾನವೀಯ ಮೌಲ್ಯಗಳು ಕಡಿಮೆಯಾಗಿ ಸಂಸ್ಕಾರದ ಕೊರತೆಯಾಗಿದೆ. ಹಾಗಾಗಿ ಓದುವ ಸಂಸ್ಕೃತಿ ಬೆಳೆಸಲು ಕಾದಂಬರಿ ಬರೆಯಲು ಮುಂದಾದೆ ಇದು ತಿಳಿಸಿದರು.

ಮಹಿಳಾ ಸಾಧಕರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರ ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು. ಡಾ.ಛಾಯಾ ಆರ್.ಪಿ. (ಜಾನಪದ), ಡಾ. ಮಂಜುಳಾ ಜಿ.ಎ.(ವೈದ್ಯಕೀಯ), ಡಾ. ದೇವಿಕಾ ಎನ್.ಎಸ್.‌(ಸಾಹಿತ್ಯ), ವರುಣ ಹೆಚ್. ಆರ್.‌(ಕೃಷಿ), ಶ್ವೇತಾ ಎಂ.ಯು.(ನಿರೂಪಣೆ), ಲಕ್ಷ್ಮಿ (ಪೌರ ಕಾರ್ಮಿಕ), ವಸಂತಾ ಟಿ.ಸಿ.(ಸಮಾಜ ಸೇವೆ), ವನಿತಾ ಎಸ್.‌ಎಸ್.‌(ರಂಗಭೂಮಿ), ವಾಣಿ ಜಿ.ಎನ್.‌(ಪ್ರಸಾದನ), ರುಕ್ಮಿಣಿ ವೈ.ಜಿ.(ಪೊಲೀಸ್‌), ಅರುಣ ಕೆಂಪರಾಜು ಎಸ್.‌ ಎನ್.‌(ಸಂಘಟನೆ), ವಾಣಿಶ್ರೀ ಎಸ್.‌ (ಶಿಕ್ಷಣ) ಹಾಗೂ ಫಾತಿಮಾ ಎಂ.(ಶುಶ್ರೂಷಕಿ) ಸನ್ಮಾನ ಸ್ವೀಕರಿಸಿದರು.

Related posts

ಕಳೆದ ಮೂರು ವರ್ಷಗಳಲ್ಲಿ 3 ಸಾವಿರ ರೈತರು ಆತ್ಮಹತ್ಯೆ : ನಿಖಿಲ್ ಕುಮಾರಸ್ವಾಮಿ

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

ಮೋದಿಜೀ ಕರೆ ನೀಡಿದ ಮಿತ ಬಳಕೆ, ಮನವಿಯೇ ಹೊರತು ಕಾನೂನಲ್ಲಾ, ವಿರೋಧವೇಕೇ?

Leave a Comment