NEWS

ಮಂಡ್ಯದಲ್ಲಿ ಪ್ರತಿಭಾ ನಂದಕುಮಾರ್ ಕಾವ್ಯಾನುಸಂಧಾನ ಜನವರಿ 24ಕ್ಕೆ

ಪಾಲನೆ ನ್ಯೂಸ್
ಮಂಡ್ಯ: ಕನ್ನಡನಾಡಿನ ಹೆಸರಾಂತ ಕವಯತ್ರಿ, ಸಂವೇದನಾಶೀಲ ಲೇಖಕಿ ಪ್ರತಿಭಾ ನಂದಕುಮಾರ್ ಅವರ ಕವಿತೆಗಳ ಕಾವ್ಯಾನುಸಂಧಾನ ಕಾರ್ಯಕ್ರಮವನ್ನು ಮಂಡ್ಯ ಸಾಂಸ್ಕೃತಿಕ ಲೋಕದ ದಿಗ್ಗಜ ಸಂಸ್ಥೆ ಕರ್ನಾಟಕ ಸಂಘವು ಜನವರಿ 24ರ ಸಂಜೆ 4 ಗಂಟೆಗೆ ಆಯೋಜಿಸಿದೆ.

ಈ ಕಾವ್ಯಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯದ ತಜ್ಞರಾದ ಪ್ರೊ.ಆಶಾ ಅವರು ವಹಿಸಿದ್ದು, ಮೈಸೂರಿನ ಸಿದ್ಧಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ತ್ರಿವೇಣಿ ಅವರು ಕವಿತೆಗಳಿಗೆ ವ್ಯಾಖ್ಯಾನ ನೀಡಲಿದ್ದಾರೆ.

ಮಹಿಳಾ ಸಂವೇದನೆ ಮತ್ತು ಲಿಂಗ ಸಮಾನತೆಯ ಕುರಿತು ಪ್ರತಿಭಾ ನಂದಕುಮಾರ್ ಅವರ ಕಾಡುವ ಕವಿತೆಗಳನ್ನು ಹೊಸತಲೆಮಾರಿನ ಕಾಲೇಜು ವಿದ್ಯಾರ್ಥಿಗಳು ವಾಚಿಸಲಿದ್ದಾರೆ ಎಂದು ಕರ್ನಾಟಕ ಸಂಘದ ಮಹಿಳಾ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.

ನೆಲಮೂಲ ಸಂಸ್ಕೃತಿ, ನಾಡದೇವತೆಯ ಐತಿಹ್ಯ ಮತ್ತು ಸ್ತ್ರೀ ಸಂವೇದನೆಯ ಅದ್ಭುತ ಕವಿತೆಯಾದ ‘ರಾತ್ರಿ ನಾನು ಚಾಮುಂಡಿ ಕಳ್ಳು ಕುಡಿಯುತ್ತಾ’ ಕವಿತೆಯನ್ನು ಮಂಡ್ಯ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ರೇವಣ್ಣ ವಾಚಿಸಿದರೆ, ಮಾನಸ ಗಂಗೋತ್ರಿಯ ಕುವೆಂಪು ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಹರ್ಷವರ್ಧನ ಅವರು ‘ನಾವು ಹುಡುಗಿಯರೇ ಹೀಗೆʼ ಕವಿತೆಗೆ ದನಿಯಾಗುತ್ತಿದ್ದಾರೆ. ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ದ್ವಿತೀಯ ಎಂಎ ವಿದ್ಯಾರ್ಥಿ ಕೌಶಲ್ಯ ಅವರು ‘ನಾವು ಹುಡುಗಿಯರೇ ಹೀಗೆʼ ಕವಿತೆಯನ್ನು ಪ್ರಸ್ತುತಪಡಿಸಲಿದ್ದಾರೆ.

ಸುಸ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳ ಇಂಪಾದ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು ಕವಿತೆಯ ವಾಚನ, ವ್ಯಾಖ್ಯಾನದ ನಂತರ ಕಾವ್ಯಾಸಕ್ತರು ಮತ್ತು ಅತಿಥಿಗಳ ನಡುವೆ ಪುಟ್ಟ ಸಂವಾದವೂ ಇರಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶ ಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಾಗರೇವಕ್ಕ, ಸಂಚಾಲಕರಾದ ಡಾ.ದೇವಿಕಾ ಎನ್.ಎಸ್. ಮತ್ತಿತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿರಲಿದ್ದು, ಕಾವ್ಯಾಸಕ್ತರು ಮುಕ್ತ ಸಂವಾದದಲ್ಲಿ ಪಾಲ್ಗೊಳ್ಳಬಹುದು ಎಂದು ಲೇಖಕಿ ಡಾ.ಎಂ.ಎಸ್. ಅನಿತಾ ಮಂಗಲ ಅವರು ತಿಳಿಸಿದ್ದಾರೆ.

Related posts

ಬಿಗ್ ಬಾಸ್‌ನ ರಜತ್ ರೀಲ್ಸ್‌ ಗೆ ಕರ್ನಾಟಕ ಸೇನಾಪಡೆ ಪ್ರತಿಭಟನೆ

ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ : ಜಿ.ಪಂ ಸಿಇಓ ಸೂಚನೆ

ಅಂಡರ್ ಪಾಸ್ ಸೇತುವೆಗೆ ಬಸ್ ಡಿಕ್ಕಿಒಡೆದು 18 ಮಂದಿಗೆ ಗಾಯ

Leave a Comment