NEWS

ಹೆದ್ದಾರಿ ಒತ್ತುವರಿ ತೆರವಿಗೆ 15ರವರೆಗೆ ಗಡುವು

ಎರಡು ಭಾಗದಲ್ಲೂ 20 ಮೀಟರ್ ಅಂತರದವರೆಗೆ ಕಟ್ಟಡ ನಿರ್ಮಿಸುವಂತಿಲ್ಲ: ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ವಿಶಾಲ ಪಾದಚಾರಿ ಮಾರ್ಗ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ | ಮಾಲೀಕರ ಆಸ್ತಿ ಖಾತೆಯ ಬದಲು ಮೂಲ ಖರೀದಿ, ಮಂಜೂರಾತಿ ದಾಖಲೆಗಳ ಪರಿಶೀಲನೆ

ಪಾಲನೆ ನ್ಯೂಸ್

ಮಂಡ್ಯ: ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಎಸ್. ಡಿ. ಜಯರಾಂ ವೃತ್ತದಿಂದ ಮಹಾ ವೀರ ವೃತ್ತದವರೆಗಿನ ಪಾದಚಾರಿ ಮಾರ್ಗದ ಒತ್ತುವರಿಯನ್ನು ಫೆ.15 ರೊಳಗೆ ತೆರವುಗೊಳಿಸಿ ವಿಶಾಲ ಪಾದಚಾರಿ ಮಾರ್ಗ ರೂಪಿಸುವಂತೆ ಅಪರ ಜಿಲ್ಲಾ ಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಉಪವಿಭಾಗಾಧಿಕಾರಿ, ತಹಸೀಲ್ದಾ‌ರ್, ನಗರಸಭೆ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿ, *30 ಕೋಟಿ ವೆಚ್ಚದಲ್ಲಿ ಉಮ್ಮಡಹಳ್ಳಿ ಗೇಟ್‌ನಿಂದ ಕಿರಂಗೂರುವರೆಗೆ ಹೆದ್ದಾರಿ ನಿರ್ಮಾಣ ಹಾಗೂ ನಗರದಲ್ಲಿ ಪಾದಚಾರಿ ಮಾರ್ಗದ ವಿಸ್ತರಣೆಯಾಗುತ್ತಿದೆ. ಕೆಲವೆಡೆ ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಸಾರ್ವಜನಿಕರು ಅನಾನೂಕೂಲ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ನಗರದ ಅಭಿವೃದ್ಧಿ ಹಾಗೂ ಸುವ್ಯವಸ್ಥಿತ ಸಂಚಾರದ ಕಾರಣಕ್ಕೆ ಫೆ.15 ರೊಳಗೆ ಒತ್ತುವರಿತೆರವುಗೊಳ್ಳಬೇಕು. ಅದಕ್ಕೂ ಮುಂಚೆ ನಿಯಮಾನುಸಾರ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರುನಾಡ ಸೇವಕರು ಸಂಘಟನೆಯ ರಾಜ್ಯವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ, ನಗರ ದಲ್ಲಿ ಕ್ರಮಬದ್ದವಾಗಿ ಪಾದಚಾರಿ ಮಾರ್ಗ ನಿರ್ಮಾಣವಾಗುತ್ತಿಲ್ಲ. ಕೆಲವೆಡೆ ಮೂವತ್ತು ಅಡಿಗೆ ಮತ್ತೊಂದು ಕಡೆ ಮೂರು ಅಡಿಗೆ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ನಿಯಮದ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ ಎರಡು ಭಾಗದಲ್ಲೂ ತಲಾ 20 ಮೀಟರ್‌ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ, ಒತ್ತುವರಿ ತೆರವು ಗೊಳಿಸಿ ಪಾದಚಾರಿ ಮಾರ್ಗ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ದಾಸೇಗೌಡ ವೃತ್ತದಲ್ಲಿ ರಸ್ತೆಗೂ ಪಾದಚಾರಿ ಮಾರ್ಗಕ್ಕೂ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಭೂಗತ ಗ್ಯಾಸ್ ಪೈಪ್ ಲೈನ್ ಇದರಿಂದ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ. ನಗರದುದ್ದಕ್ಕೂ ಸಮ ಪ್ರಮಾಣದ ಪಾದ ಚಾರಿ ಮಾರ್ಗ ನಿರ್ಮಾಣವಾಗಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.

ನಗರಸಭೆ ಆಯುಕ್ತ ಯು.ಪಿ.ಪಂಪಾಶ್ರೀ ಮಾತನಾಡಿ, ಎಸ್.ಡಿ.ಜಯರಾಂ ವೃತ್ತದಿಂದ ಮಹಾವೀರ ವೃತ್ತದವರೆಗೆ ಒಟ್ಟು 32 ಆಸ್ತಿಗಳು ಇದ್ದು, ಈಗಾಗಲೇ 14 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನುಳಿದವರಿಗೂ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಮಾಲೀಕರ ಆಸ್ತಿ ಖಾತೆಯ ಬದಲು ಮೂಲ ಖರೀದಿ, ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಿ ಫೆ.15 ರೊಳಗೆ ಒತ್ತುವರಿ ತೆರವುಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್. ಡಿ. ಜಯರಾಮ್‌ ಸಭೆಯಲ್ಲಿ ಮಾತನಾಡಿ, ನಗರದಲ್ಲಿನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ನಗರಸಭೆ ವಿಫಲವಾಗಿದೆ. ವಿವಿ ರಸ್ತೆಯಲ್ಲಿ ಎಸ್‌ಬಿಐ ಬ್ಯಾಂಕ್ ಎದುರಿನ ಗಲ್ಲಿಗೆ ಖಾಸಗಿ ವ್ಯಕ್ತಿಗಳು ಬೀಗ ಜಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ. ಸರ್ವೀಸ್ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಹಲವೆಡೆ ಗ್ರಾಮಗಳ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದರೂ ಪ್ರಾಧಿಕಾರ ಟೋಲ್ ಸಂಗ್ರಹಕ್ಕೆ ಮಾತ್ರವೇ ಆದ್ಯತೆ ನೀಡಿದೆ. ವನ್ಯಜೀವಿಗಳ ಓಡಾಟಕ್ಕಾಗಿನ ಸೇತುವೆ ಪೂರ್ಣಗೊಳಿಸಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರುಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ವಿಶ್ವ ಮಾತನಾಡಿ, ಹೆದ್ದಾರಿಯಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಸರ್ವೀಸ್ ರಸ್ತೆಗಳಲ್ಲಿ ಚರಂಡಿ ನೀರು ಹರಿಯದಂತೆ ಚರಂಡಿ ನಿರ್ಮಿಸಲಾಗುವುದು. ವನ್ಯಜೀವಿಗಳ ಓಡಾಟಕ್ಕಾಗಿನ ಸೇತುವೆಯನ್ನು ಸಂಪೂರ್ಣಗೊಳಿಸಲು ಅಗತ್ಯ ಅನುಮತಿ ಪಡೆದು ಕಾಮಗಾರಿ ಸಂಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಸಹಾಯಕ ಕಾರ್ಯ ಪಾಲಕ ಪುಟ್ಟಯ್ಯ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಶಿವಕುಮಾ‌ರ್, ಭೂದಾಖಲೆಗಳ ಸಹಾಯಕ ಅಧಿಕಾರಿ ಹಾಗೂ ಕರುನಾಡ ಸೇವಕರು ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ರಾಜೂಗೌಡ, ಮುದ್ದೇಗೌಡ, ಶಿವರಾಂ, ವೆಂಕಟೇಶ್, ಸೋಮಶೇಖ‌ರ್, ರೈತಸಂಘದ ಅಣ್ಣಯ್ಯ, ಕಿರಣ್‌ಕುಮಾ‌ರ್ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಫೆ.1ರಂದು ಶಿವಳ್ಳಿ ಗ್ರಾಮದಲ್ಲಿ ಹಿಂದು ಸಮಾಜೋತ್ಸವ

ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಹಣಕಾಸು ಸೇರ್ಪಡೆ ಕುರಿತು ಒಂದು ದಿನದ ಕಾರ್ಯಗಾರ ಆಯೋಜನೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬ್ರಿಟನ್ ಕಿಂಗ್ ಚಾರ್ಲ್ಸ್ III ತಿರುಗೇಟು

Leave a Comment