NEWS

ಮನಸ್ಸು ಅರಳಿಸುವ ಓದಿನ ಪ್ರಯೋಜನ ಅಪಾರ: ಪ್ರೊ. ಜಯಪ್ರಕಾಶ್ ಗೌಡ

ಪುಸ್ತಕಗಳನ್ನು ಓದಿದಾಗ ಮನಸ್ಸು ಉಲ್ಲಾಸ, ವಿಶಾಲ

ಪಾಲನೆ ನ್ಯೂಸ್ & ವ್ಯೂಸ್

ಮಂಡ್ಯ: ಓದದೆಯೂ ರಾಮಾಯಣ, ಮಹಾಭಾರತದಂತಹ ಮಹಾ ಕಾವ್ಯಗಳನ್ನು ನಮ್ಮ ಹಳ್ಳಿಗರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿತ್ಯ ನಡೆಯುತ್ತಿದ್ದ ಪಾರಾಯಣ ಕೇಳಿ ಮನನ ಮಾಡಿಕೊಂಡಿದ್ದಾರೆ. ಆದರೆ, ಓದಿನ ಪ್ರಯೋಜನ ಅಪಾರ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.

ಜೂನ್ 1, ಸೋಮವಾರ ಸಂಜೆ ಅನ್ನಪೂರ್ಣೇಶ್ವರಿ ನಗರದ ನಿವಾಸಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಅವರ ನಿವಾಸ ಮೌರ್ಯ ಸದನದ ವಿಶ್ವಮಾನವ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ  ಅವರ 63ನೇ ಹುಟ್ಟುಹಬ್ಬದ ಸಂದರ್ಭದಲ್ಲಿ  ಏರ್ಪಡಿಸಲಾಗಿದ್ದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ  ಮಾತನಾಡಿದರು.

ಪ್ರೊ. ಜಯಪ್ರಕಾಶ್ ಗೌಡ

ಓದುವುದೂ ಒಂದು ಕ್ರಮ. ಕಂಠಪಾಠ ಮಾಡುವುದರಿಂದ ಉಚ್ಚಾರಣೆಯ ದೋಷ ಕಡಿಮೆಯಾಗತ್ತದೆ. ಓದಿದಾಗ ಮನಸ್ಸು ಉಲ್ಲಾಸಗೊಂಡು ಆದ್ರಗೊಳ್ಳುತ್ತದೆ. ಸಂಸ್ಕಾರ,  ವಿಶಾಲ ಮನೋಭಾವ ಬೆಳೆಯುವುದು ಎಂದು ತಿಳಿಸಿದರು.

ಮೊಬೈಲನ್ನು ಏಕೆ ಬಳಸಬೇಕು, ಎಷ್ಟು ಬಳಸಬೇಕು. ಊಟ ಹೇಗೆ ಮಾಡಬೇಕು. ನಡೆ ನುಡಿ ಹೇಗಿರಬೇಕು, ಜೀವನ ನಿರ್ವಹಿಸುವುದು ಹೇಗೆ ಮುಂತಾದ ವಿಷಯಗಳನ್ನು ಕಲಿಸುವುದೇ ಪುಸ್ತಕಗಳು. ಓದಿನ ಮೂಲಕ ಪಡೆಯುವ ಅರಿವು ಬಹಳ ಮುಖ್ಯ ಎಂದು ಹೇಳಿದರು.

ಓದಿನ ಶಕ್ತಿಯನ್ನು ಅರಿತಿದ್ದ ದಾನ ಚಿಂತಾಮಣಿ ಅತ್ತಿಮಬ್ಬೆ 1000 ಹಸ್ತ ಪ್ರತಿಗಳನ್ನು ಬರೆಯಿಸಿ ಹಂಚಿದ್ದು, ಅಂದಿನ ಕಾಲದಲ್ಲಿ ಓದಿಗೆ ನೀಡಿದ ಮಹತ್ವವನ್ನು ಸಾರುತ್ತದೆ. ಪುಸ್ತಕಗಳನ್ನು ಶೋಕೇಸ್ ನಲ್ಲಿ ಇಟ್ಟು ಬೀಗ ಹಾಕುವುದಲ್ಲ. ವೀಣೆಯನ್ನು ಮನೆಯಲ್ಲಿ ಇಟ್ಟು ಸುಮ್ಮನೆ ಮೀಟಿದರೂ, ಪುಸ್ತಕಗಳನ್ನು ಸವರಿದರೂ ಹಿತಾನುಭವ ನೀಡುತ್ತದೆ ಎಂದು ತಿಳಿಸಿದರು.

ಉಮೇಶ್ ದಡಮಹಳ್ಳಿ

ಮಂಡ್ಯ ವಿಶ್ವವಿದ್ಯಾನಿಲಯ ಕನ್ನಡ ಉಪನ್ಯಾಸಕ  ಉಮೇಶ್ ದಡಮಹಳ್ಳಿ ‘ನಾ ಮೆಚ್ಚಿದ ಪುಸ್ತಕ- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪರಿಸರದ ಕಥೆಗಳು’ ಕುರಿತು ಮಾತನಾಡಿ, ಪ್ರಕೃತಿ ನಾಶವಾದರೆ ಪ್ರಾಣಿ ಸಂಕುಲ, ಸಸ್ಯ ಸಂಕುಲ ಬದುಕುವುದಿಲ್ಲ ಎಂದು ಪ್ರತಿಪಾದಿಸಿದವರು ತೇಜಸ್ವಿ. ಪ್ರಕೃತಿಯ ಭಾಗ ಮನುಷ್ಯ ಎಂದು ಹೇಳುತ್ತಾ ಪರಿಸರದ ಕಥೆಗಳನ್ನು ಕಟ್ಟಿಕೊಟ್ಟರು ಎಂದು ತಿಳಿಸಿದರು.

ನಾಟಿ ಔಷಧಿ ಪದ್ಧತಿ ನಾಶಕ್ಕೆ ಜ್ಞಾನ ಹಂಚದ ನಾಟಿ ವೈದ್ಯರೇ ಕಾರಣ. ಮೌಢ್ಯಗಳು, ಕಂದಾಚಾರಗಳ ಗುಟ್ಟುಗಳನ್ನು ರಟ್ಟು ಮಾಡುತ್ತಾ ಜನರಿಗೆ ಹತ್ತಿರವಾದ ವಿಷಯಗಳ ಬಗ್ಗೆ ಬರೆಯುತ್ತಾ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತಾರೆ ತೇಜಸ್ವಿ ಎಂದು ತಿಳಿಸಿದರು.

ಅಲಯನ್ಸ್ ಕೆ.ಟಿ. ಹನುಮಂತು ಅವರು ಮಾತನಾಡಿ, ಒಂದು ಲಕ್ಷ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಒಳ್ಳೆಯ ಕಾರ್ಯಕ್ರಮ. ಓದುಗರನ್ನು ಸೆಳೆಯುವ, ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಕೆಲಸ ಇದರಿಂದ ಆಗುತ್ತದೆ. ಪ್ರತಿನಿತ್ಯ 1 ಗಂಟೆ ಕಾಲ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಓದುವ ಸಂಸ್ಕಾರ ಬಾಲ್ಯದಲ್ಲಿಯೇ ಆಗಬೇಕು. ಓದುವ ಸಂಸ್ಕೃತಿ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಚಳವಳಿಯೇ ಆಗಬೇಕು ಎಂದು ಆಶಿಸಿದರು.

ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಚಿಕ್ಕಸ್ವಾಮಿ ದಂಪತಿಯನ್ನು ಅಭಿನಂದಿಸಲಾಯಿತು. ಸಮಿತಿ ಸಂಚಾಲಕ ಕಾರಸವಾಡಿ ಮಹದೇವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ಸದಸ್ಯರಾದ ಡಾ. ಎಂ. ಕೆಂಪಮ್ಮ, ಚಂದ್ರಶೇಖರ ದ.ಕೋ.ಹಳ್ಳಿ,, ಮಂಚಶೆಟ್ಟಿ ಎಂ., ಸದ್ದಾಂ ತಗ್ಗಹಳ್ಳಿ, ಅನಿಲ್ ಬಾಬು ಉಪಸ್ಥಿತರಿದ್ದರು. ಕವಿ ಸಬ್ಬನಹಳ್ಳಿ ಶಶಿಧರ, ಡಾ. ಮಹೇಶ್ ಕೆ.ಎಂ., ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Related posts

ಆಧುನಿಕ ಸಮಾಜದಲ್ಲೂ ಅಸ್ಪೃಶ್ಯತೆ ಆಚರಣೆ ಒಂದು ಸಾಮಾಜಿಕ ಪಿಡುಗು

ಕೆಆರ್ ಎಸ್  ಹಿನ್ನೀರು ಪ್ರದೇಶದಲ್ಲಿ  ಒತ್ತುವರಿ ತೆರವುಗೊಳಿಸಲು ಸರ್ವೆ ಸೂಚನೆ

2028ರಲ್ಲಿ ಮತ್ತೆ ಎಚ್‌ಡಿಕೆ‌ ಮುಖ್ಯಮಂತ್ರಿ ಆಗುತ್ತಾರೆ : ಜಿ.ಡಿ.ಹರೀಶ್‌ ಗೌಡ

Leave a Comment